RSS ಮುಖಂಡನ ಮನೆ ಮೇಲೆ ಮಧ್ಯರಾತ್ರಿ ದಾಳಿ – ಕಾರಣ ಕೇಳಿ ದ.ಕ. ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

Public TV
2 Min Read
RSS leader UG Radha and Dakshina Kannada SP Arun Kumar

– ಪೊಲೀಸರ ಕ್ರಮ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಯು.ಜಿ. ರಾಧಾ
– 20 ಲಕ್ಷ ರೂ. ಮಾನನಷ್ಟ ಪರಿಹಾರ ಕೋರಿ ಅರ್ಜಿ

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಎಸ್‌ಪಿಗೆ ಹಿಂದೂ ಮುಖಂಡರ ಮನೆ ಮೇಲಿನ ಮಿಡ್ ನೈಟ್ ದಾಳಿ (Mid Night Raid) ಪ್ರಕರಣ ಬಿಸಿ ತುಪ್ಪವಾಗಿ ಪರಿಣಮಿಸಲು ಆರಂಭವಾಗಿದೆ. ಜಿಲ್ಲೆಯ ಹಿರಿಯ ಅರ್‌ಎಸ್‌ಎಸ್‌ (RSS) ಮುಖಂಡನ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌(High Court) ಈಗ ನೋಟಿಸ್‌ ಜಾರಿ ಮಾಡಿದೆ.

ಯು.ಜಿ.ರಾಧಾ ಅವರ ಮನೆ ಮೇಲೆ ದಾಳಿಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಡಾ.ಅರುಣ್ ಕುಮಾರ್‌ಗೆ(Arun Kumar) ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಸಲ್ಲಿಸಬೇಕು. ಅಷ್ಟೇ ಅಲ್ಲದೇ ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ತಾಕೀತು ಮಾಡಿದೆ.

ಜೂನ್ 1 ರಂದು ಉಪ್ಪಿನಂಗಡಿಯಲ್ಲಿರುವ (Uppinangady) ನನ್ನ ಮನೆಗೆ ಪೊಲೀಸರು ರಾತ್ರಿ ಬಂದಿದ್ದರು. ನನ್ನ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣ ಇಲ್ಲದೇ ಇದ್ದರೂ ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದಾರೆ. ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಆರೋಪಿಸಿ ಯು.ಜಿ.ರಾಧಾ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

RSS leader UG Radha House Raid

ವಿಚಾರಣೆ ನಡೆಸುವ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರು. ಮಾನನಷ್ಟ ಪರಿಹಾರ ನೀಡುವಂತೆ ಯು.ಜಿ.ರಾಧಾ ಹೈಕೋರ್ಟ್‌ಗೆ ದೂರು ನೀಡಿದ್ದರು. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು. ನ್ಯಾ. ಸುನಿಲ್‌ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈಗ ದಕ್ಷಿಣ ಕನ್ನಡ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದೆ.  ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಮನೆ ಮೇಲೆ ರೇಡ್‌ – ದ.ಕ. ಪೊಲೀಸರ ವಿರುದ್ಧವೇ ತನಿಖೆಗೆ NHRC ಆದೇಶ

ಯು.ಜಿ.ರಾಧಾ ಅವರು ಈಗಾಗಲೇ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ್ದಾರೆ. ಹಿಂದೂ ನಾಯಕರ ಮನೆಗಳಿಗೆ ಮಧ್ಯರಾತ್ರಿ ತೆರಳಿ ಫೋಟೋ ತೆಗೆದು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಜಿಲ್ಲಾ ಎಸ್‌ಪಿಗೆ ನೋಟಿಸ್‌ ಜಾರಿ ಮಾಡಿದೆ.

ಶ್ರೀ ರಾಮ ಶಾಲಾ ಸಂಚಾಲಕ, ವೃತ್ತಿಯಲ್ಲಿ ಔಷಾಧಾಲಯದ ಮಾಲಕರಾದ ಯು.ಜಿ. ರಾಧಾ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಇವರ ವಿರುದ್ಧ ಇಲ್ಲಿಯವರೆಗೆ ಯಾವುದೇ ಪೊಲೀಸ್‌ ಪ್ರಕರಣ ದಾಖಲಾಗಿಲ್ಲ. ಆದರೆ ಜೂ.1 ರಂದು ಅವರ ಔಷಧಾಲಯಕ್ಕೆ ಭೇಟಿ ನೀಡಿ ಫೋಟೋ ತೆಗೆದ ಪೊಲೀಸರು, ಜೂನ್‌ 2ರ ತಡ ರಾತ್ರಿ 11.58 ಕ್ಕೆ ಬಂದು 12.07 ನಿಮಿಷಕ್ಕೆ ನಿರ್ಗಮಿಸಿದ್ದರು. 54 ವರ್ಷದ ರಾಧಾ ಅವರನ್ನು ಮಧ್ಯ ರಾತ್ರಿ ನಿದ್ರೆಯಿಂದ ಎಬ್ಬಿಸಿ ಅವರ ಜೊತೆ ಪೊಟೋ ತೆಗೆದಿದ್ದರು. ಇದನ್ನೂ ಓದಿ: ಮಂಗಳೂರು | ಕಾರು ಅಪಘಾತದಲ್ಲಿ `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ

ಯಾವುದೇ ಲಿಖಿತ ಆದೇಶ ಪತ್ರವಿಲ್ಲ. ಫೋಟೋ ಯಾಕೆ ತೆಗೆದಿದ್ದೀರಿ ಎನ್ನುವುದಕ್ಕೆ ಕಾರಣ ನೀಡಿಲ್ಲ. ಪ್ರಶ್ನಿಸಿದರೆ ಪೊಲೀಸರು ಮೇಲಾಧಿಕಾರಿಗಳ ಆದೇಶ ಎಂಬ ಉತ್ತರ ನೀಡಿದ್ದರು ಎಂದು ಯು.ಜಿ. ರಾಧಾ ಹೇಳಿದ್ದರು.

Share This Article