ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳ ಸರ್ಕಸ್ – ತಡರಾತ್ರಿ ಕೈ-ದಳ ನಾಯಕರಿಂದ ಸರಣಿ ಮೀಟಿಂಗ್

Public TV
2 Min Read
meeting

ಬೆಂಗಳೂರು: ಮುಖ್ಯಮಂತ್ರಿಗಳು ಅಮೆರಿಕದಿಂದ ಬೆಂಗಳೂರಿಗೆ ಬಂದ ಬಳಿಕ ನಿರಂತರ ಸಭೆಗಳ ಮೇಲೆ ಸಭೆ ನಡೆಸಲಾಯಿತ್ತು. ಈ ಮೂಲಕ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ತಾಜ್‍ವೆಸ್ಟ್ ಎಂಡ್ ಹೊಟೆಲ್‍ನಲ್ಲಿ ಕಾಂಗ್ರೆಸ್- ಜೆಡಿಎಸ್ ನಾಯಕರು ತಡರಾತ್ರಿವರೆಗೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ರಾಜೀನಾಮೆಯನ್ನು ನೀಡಿದ ಶಾಸಕರನ್ನು ಮನವೊಲಿಸಲು ರಣತಂತ್ರ ರೂಪಿಸಿದ್ದಾರೆ.

rebel congress jds resigns e

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಕೈ-ತೆನೆಯ ನಾಯಕರೆಲ್ಲಾ ಸುದೀರ್ಘ ಸಭೆ ನಡೆಸಿದ್ರು. ಸುಮಾರು ನಾಲ್ಕು ಗಂಟೆಗಳ ನಿರಂತರವಾಗಿ ಚರ್ಚೆ ಮಾಡಿದ್ದಾರೆ. ಆದರೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ಒಮ್ಮತ ಮೂಡಿಲ್ಲ. ಅಲ್ಲದೆ ಮುಂಬೈನಲ್ಲಿರುವ ಶಾಸಕರನ್ನು ಮನವೊಲಿಸುಂತೆ ಕೈ ನಾಯಕರಿಗೆ ಜೆಡಿಎಸ್ ವರಿಷ್ಠರು ಹೇಳಿದ್ದಾರೆ ಎನ್ನಲಾಗುತ್ತಿದೆ.

rebel congress jds resigns d

ಸಭೆ ಬಳಿಕ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮ ಶಾಸಕರು ವಾಪಸ್ ಆಗಲಿದ್ದಾರೆ ಅನ್ನೋ ಆಶಾ ಭಾವನೆ ವ್ಯಕ್ತಪಡಿಸಿದರು. ಇದೇ ವೇಳೆ ಡಿಕೆಶಿ ಮಾತನಾಡಿ, ನಾವೆಲ್ಲ ಇಲ್ಲಿ ಊಟಕ್ಕೆ ಬಂದಿದ್ದೇವೆ. ನಾಳೆ ಡಿಸಿಎಂ ಪರಮೇಶ್ವರ್ ಕರೆದಿರುವ ಉಪಹಾರ ಕೂಟದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ಹೇಳಿದರು.

ಸಭೆಯಲ್ಲಿ ನಡೆದ ಚರ್ಚೆಯೇನು? 
ಅತೃಪ್ತ ಶಾಸಕ ರಾಮಲಿಂಗಾರೆಡ್ಡಿ ಕೈಗೆ ಸಿಕ್ಕರೆ ಬೆಂಗಳೂರು ಶಾಸಕರನ್ನ ವಾಪಾಸ್ ಕರೆತರಬಹುದು. ಆದರೆ ರಾಮಲಿಂಗಾ ರೆಡ್ಡಿ ಮಾತುಕತೆಗೆ ಬರೋಕೆ ಸಿದ್ಧರಿಲ್ಲ ಎಂದು ಕೈ ನಾಯಕರು ಹೇಳಿದರು. ಈ ವೇಳೆ ಸಿಎಂ ಅವರು, ಯಾವ್ಯಾವ ಶಾಸಕರನ್ನ ವಾಪಾಸ್ ಕರೆತರೋಕೆ ಸಾಧ್ಯ ಅನ್ನೋ ಬಗ್ಗೆ ಮಾಹಿತಿ ಕೇಳಿದರು. ಬೆಂಗಳೂರು ಶಾಸಕರನ್ನ ಹೊರತುಪಡಿಸಿ ಉಳಿದವರನ್ನ ಕರೆತರುವ ಬಗ್ಗೆ ನಂಬಿಕೆ ಇಲ್ಲ ಎಂದು ಕೈ ನಾಯಕರು ಹೇಳಿದರು. ಸಚಿವರು ಯಾರಾದ್ರೂ ರಾಜೀನಾಮೆ ಕೊಟ್ಟರೆ ಹೆಬ್ಬಾರ್, ಬಿಸಿ ಪಾಟೀಲ್ ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು ಶಾಸಕರದ್ದು ಎರಡು ಕಂಡೀಷನ್-ಮೈತ್ರಿಯನ್ನ ಉಳಿಸುತ್ತಾ 50:50 ಫಾರ್ಮುಲಾ!

Congress JDS joint pressmeet A 1

ಸಿಎಂ ಎಲ್ಲಾ ಅತೃಪ್ತ ಶಾಸಕರ ಜೊತೆ ಮಾತನಾಡಲಿ ಎಂದು ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಮಾತು ಕೇಳಿ ದೇವೇಗೌಡರತ್ತ ನೋಡಿದ ಸಿಎಂ, ದೇವೇಗೌಡರಿಂದ ಯಾವ ಸಂದೇಶವೂ ರವಾನೆಯಾಗಿಲ್ಲ. ಹೀಗಾಗಿ ಮೊದಲು ನೀವು ಒಂದು ಸುತ್ತು ಮಾತನಾಡಿ ನಂತರ ನಾನು ಮಾತಾಡ್ತೀನಿ ಎಂದ ಸಿಎಂ ಹೇಳಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸಿಎಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ವೇಣುಗೋಪಾಲ್ ಸೇರಿ ಕಾಂಗ್ರೆಸ್ ಮುಖಂಡರು ಇಷ್ಟೆಲ್ಲ ಮಾತನಾಡುತ್ತಿದ್ದರೂ ದೇವೇಗೌಡ್ರು ತುಟಿಕ್ ಪಿಟಿಕ್ ಎನ್ನಲಿಲ್ಲ. ಸಭೆ ಪೂರ್ತಿ ಮೌನಕ್ಕೆ ಶರಣಾಗಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *