ಬೆಂಗಳೂರು: 2019 ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಹಿಡಿದಿದ್ದು, ಕಳೆದ ಬಾರಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಈ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಮಧ್ಯಮ ವರ್ಗ ಹಾಗೂ ಯುವ ಜನಾಂಗವೇ ಕಾರಣ ಎಂದರೆ ತಪ್ಪಾಗಲಾರದು.
ಮೋದಿ ತಮ್ಮ 5 ವರ್ಷದ ಅವಧಿಯಲ್ಲಿ ಜಾರಿ ಮಾಡಿದ ಕೆಲ ಯೋಜನೆಗಳು ಮೋದಿ ಅವರಿಗೆ ಮಧ್ಯಮ ವರ್ಗದ ಬೆಂಬಲ ಸಿಗಲು ಕಾರಣವಾಗಿದೆ. ಬಜೆಟ್ ನಲ್ಲಿ 2.5 ಲಕ್ಷ ರೂ. ಇದ್ದ ಆದಾಯ ತೆರಿಗೆ ಮಿತಿಯನ್ನ 5 ಲಕ್ಷ ರೂ. ವರೆಗೆ ಏರಿಸಿದ್ದರು. ಅಲ್ಲದೇ 6.5 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವವರಿಗೆ ಸಣ್ಣ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ನೀಡಿದ್ದರು.
Advertisement
Advertisement
ಮೊದಲ ಬಾರಿಗೆ ಪ್ರಧಾನಿಯಾಗಿ ತಮ್ಮ ಅವಧಿಯನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಮೋದಿ ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಕೈಗೊಂಡಿದ್ದರು. ಐತಿಹಾಸಿಕ ಜಿಎಸ್‍ಟಿ ತೆರಿಗೆಯನ್ನು ಜಾರಿ ಮಾಡುವ ಮೂಲಕ ತೆರಿಗೆಯನ್ನು ಸರಳಗೊಳಿಸಿದ್ದರು.
Advertisement
ನೋಟು ನಿಷೇಧ, ರಫೇಲ್ ವಿಮಾನ ಖರೀದಿ ವಿವಾದ ಬಿಟ್ಟರೆ ಮೋದಿ ಸರ್ಕಾರದಲ್ಲಿ ಭಾರೀ ಟೀಕೆಗೆ ಗುರಿಯಾದ ವಿಚಾರ ಯಾವುದು ಇರಲಿಲ್ಲ. ಜನಧನ್, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಮಹತ್ವದ ಯೋಜನೆಗಳು ಜಾರಿಯಾಗಿತ್ತು. ಆಡಳಿತಾವಧಿಯಲ್ಲಿ ಭ್ರಷ್ಟಚಾರ ತಡೆ, ವಿದೇಶಗಳಲ್ಲಿ ಕಪ್ಪು ಹಣ ತರಲು ಸರ್ಕಾರ ಕೈಗೊಂಡಿದ್ದ ಹಲವು ಕ್ರಮಗಳು ಬಗ್ಗೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Advertisement
ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನಾ ಚುನಾವಣೆಯ ಪೂರ್ವದಲ್ಲಿ ಜಾರಿ ಮಾಡಿದ್ದು ಮೋದಿ ಸರ್ಕಾರ ಮತ್ತೊಂದು ಉತ್ತಮ ನಿರ್ಧಾರವಾಗಿತ್ತು. ರೈತರ ಖಾತೆಗಳಿಗೆ ನೇರವಾಗಿ ವಾರ್ಷಿಕ 6 ಸಾವಿರ ಹಾಗೂ ಈ ಯೋಜನೆಯನ್ನು ಡಿಸೆಂಬರ್ ನಿಂದಲೇ ಜಾರಿ ಮಾಡಿದ್ದ ಪರಿಣಾಮ ಚುನಾವಣೆಗೂ ಮುನ್ನವೇ ರೈತರ ಖಾತೆಗೆ ಹಣ ವರ್ಗಾವಣೆ ಆಗಿತ್ತು. ಕರ್ನಾಟಕದಲ್ಲಿ ಈ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಇದ್ದರೂ ಬಿಜೆಪಿ ಆಡಳಿತ ಇರುವ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರದಲ್ಲಿ ಫಲ ನೀಡಿದ್ದು ಅದು ಫಲಿತಾಂಶದಲ್ಲಿ ಪ್ರಕಟವಾಗಿದೆ.
ವಿಶ್ವಗುರು:
ವೀಶ್ವಮಟ್ಟದಲ್ಲಿ ಭಾರತವನ್ನು ಗುರುತಿಸಿಕೊಳ್ಳುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಯೋಗ ದಿನಾಚರಣೆಯನ್ನು ಅಂತಾರಾಷ್ಟ್ರೀಯ ದಿನಾಚರಣೆಯನ್ನಾಗಿ ಮಾಡಲು ಮೋದಿ ಪ್ರಮುಖ ಪಾತ್ರವಹಿಸಿದ್ದರು. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ‘ವಿಶ್ವಗುರು’ ಮಟ್ಟಕ್ಕೆ ಏರಿಕೆ ಮಾಡಿದ್ದು, ಪ್ರತಿ ಬಾರಿ ಮೋದಿ ವಿದೇಶಿ ಪ್ರವಾಸ ಬಹಳ ವಿಶೇಷವಾಗಿತ್ತು. ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ವಿಶ್ವದರಾಷ್ಟ್ರಗಳನ್ನು ಒಗ್ಗೂಡಿಸಿ ಪಾಕಿಸ್ತಾನವನ್ನು ಏಕಾಂಗಿ ಮಾಡುವ ಪ್ರಯತ್ನ ಸಫಲವಾಗಿತ್ತು.
ಮೋದಿ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರರ ಉಪಟಳದ ಸುದ್ದಿ ಬಿಟ್ಟರೆ ಯುಪಿಎಗೆ ಹೋಲಿಸಿದರೆ ಬೇರೆ ರಾಜ್ಯಗಳಲ್ಲಿ ಉಗ್ರರ ದಾಳಿ ನಡೆದಿಲ್ಲ. ಉರಿ, ಪುಲ್ವಾಮಾ ದಾಳಿ ಬಳಿಕ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡಿದ ಬಳಿಕ ಮೋದಿಯ ಜನಪ್ರಿಯತೆ ಮತ್ತಷ್ಟು ಜಾಸ್ತಿ ಆಯಿತು. ವಿಶೇಷವಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಬಿಜೆಪಿ ನಾಯಕರು, ಮೋದಿ ಅಭಿಮಾನಿಗಳು ಎನ್‍ಡಿಎ ಸರ್ಕಾರವನ್ನು ಬೆಂಬಲಿಸಿದ ಪರಿಣಾಮ ಯುವ ಜನತೆ ಮೋದಿಯನ್ನು ಮೆಚ್ಚಿಕೊಂಡಿದ್ದರು.