ಹಾಸನ: ನಗರದ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹಾಸನದ ಪ್ರತಿಷ್ಟಿತ ಸರ್ಕಾರಿ ವಿಜ್ಞಾನ ಪದವಿ ಕಾಲೇಜು ಬೇರೆ ಎಲ್ಲಾ ಕಾಲೇಜುಗಳಿಗಿಂತಲೂ ವಿಭಿನ್ನವಾಗಿ ನಿಂತಿದ್ದು, ವಿದ್ಯಾರ್ಥಿಗಳ ಪ್ರೀತಿಯ ಕಾಲೇಜಾಗಿ ಪರಿಣಮಿಸಿದೆ. ಕಾರಣ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಎಲ್ಲರೂ ಸೇರಿ ‘ಸಂವೇದನಾ ಬಳಗ’ ರಚಿಸಿಕೊಂಡಿದ್ದು, ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿದ್ದಾರೆ.
Advertisement
Advertisement
ಪ್ರತಿದಿನ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ಕಾಲೇಜಿನಲ್ಲಿಯೇ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ಮಧ್ಯಾಹ್ನ ಬಿಸಿ ಊಟದ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ. ಕಾಲೇಜಿನಲ್ಲಿ ಪ್ರತಿದಿನ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಿಸಿ ಊಟ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಸಂವೇದನಾ ಬಳಗದಿಂದ ಪ್ರತಿ ತಿಂಗಳು 30 ಸಾವಿರ ಹಣ ಸಂಗ್ರಹವಾಗುತ್ತಿದ್ದು, ಕಾಲೇಜು ತರಗತಿ ಇರುವ ದಿನಗಳಲ್ಲಿ ಊಟವನ್ನು ನೀಡಲಾಗುತ್ತಿದೆ. ಸಂವೇದನಾ ಬಳಗದಲ್ಲಿರುವ ಎಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ವಿದ್ಯಾರ್ಥಿಗಳಿಗಾಗಿ ನೀಡಿ ಮಾದರಿಯಾಗಿದ್ದಾರೆ.
Advertisement
ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೂ ತರಗತಿಗಳು ನಡೆಯುವುದರಿಂದ ವಿದ್ಯಾರ್ಥಿಗಳು ಹೊರಗಡೆ ಹೋಗಲೂ ಸಾಧ್ಯವಾಗದೆ, ಸಮಸ್ಯೆ ಎದುರಿಸುತ್ತಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂವೇದನಾ ಬಳಗದ ಬಿಸಿ ಊಟದ ಕಾರ್ಯಕ್ರಮ ಸಾಕಷ್ಟು ಅನುಕೂಲ ಕಲ್ಪಿಸಿದೆ. ಸದ್ಯ ಕಾಲೇಜು ಯುಜಿಸಿ ಯಿಂದ ಉತ್ತಮ ಗುಣಮಟ್ಟದ ಪ್ರಮಾಣ ಪತ್ರವನ್ನು ಕೂಡ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ಹೆಚ್ಚಾಗುತ್ತಿದೆ. ಕಾಲೇಜು ವಾತಾವರಣ ಕೂಡ ಉತ್ತಮವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದು, ಉಪನ್ಯಾಸಕರು ಸಹ ತಮ್ಮ ಕಾರ್ಯದಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದಾರೆ.