ಹಾವೇರಿ: ಮೈಕ್ರೋಫೈನಾನ್ಸ್ (Microfinance) ಒಂದರ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಸೇರಿ ಗ್ರಾಹಕರ ನಕಲಿ ದಾಖಲೆಗಳನ್ನು ಬಳಸಿ ಕೋಟ್ಯಂತರ ರೂ. ಹಣವನ್ನು ಸಾಲ (Loan) ಪಡೆದು ವಂಚಿಸಿರುವ ಘಟನೆ ಹಿರೇಕೆರೂರಿನಲ್ಲಿ (Hirekerur) ನಡೆದಿದೆ.
ಇಲ್ಲಿನ ಮೈಕ್ರೋಫೈನಾನ್ಸ್ ಒಂದರ ಕ್ಯಾಶಿಯರ್ ಶಿವಾನಂದಪ್ಪ ಹಾಗೂ ಮ್ಯಾನೇಜರ್ ಬಸವರಾಜಯ್ಯ ಕೋಟಿ ಕೋಟಿ ಹಣ ವಂಚಿಸಿರುವ ಆರೋಪಿಗಳಾಗಿದ್ದಾರೆ. ಆರೋಪಿಗಳು ಗ್ರಾಮೀಣ ಭಾಗದ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ನೀಡಿದ್ದೇವೆ ಎಂದು ತೋರಿಸಿ, ಸುಮಾರು 4,16,14000 ರೂ. ಹಣವನ್ನು ತಾವೇ ಪಡೆದು ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ವ್ಯಕ್ತಿಗೆ ಇರಿದಿದ್ದ ಚಾಕುವಿನಿಂದ್ಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನ- ರೌಡಿಶೀಟರ್ ಕಾಲಿಗೆ ಗುಂಡೇಟು
ಮೈಕ್ರೋಫೈನಾನ್ಸ್ ಶಾಖೆಯಲ್ಲಿ ಒಂದು ಲೆಕ್ಕ ಹಾಗೂ ಕೇಂದ್ರ ಕಚೇರಿಯಲ್ಲಿ ಮತ್ತೊಂದು ಹಣಕಾಸು ಲೆಕ್ಕಾಚಾರ ತೋರಿಸಿದ್ದು ಆರೋಪಿಗಳ ಕಳ್ಳಾಟ ಬಯಲಾಗಿದೆ. ಆರೋಪಿಗಳು ನಕಲಿ ಕ್ಯಾಶ್ ಬುಕ್ ಬಳಸಿ ಅನುಮಾನ ಮೂಡದಂತೆ 87,33,931 ರೂ. ಹಣವನ್ನು ಗ್ರಾಹಕರ ಹೆಸರಿನಲ್ಲಿ ಜಮೆ ಮಾಡಿದಂತೆ ತೋರಿಸಿದ್ದಾರೆ. ಆದರೆ ಕಚೇರಿಗೆ 8,60,000 ರೂ. ಮಾತ್ರ ಜಮೆಯಾಗಿದೆ. ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಈ ಸಂಬಂಧ ಫೈನಾನ್ಸ್ ಸಂಸ್ಥೆಯ ವಲಯದ ವ್ಯವಸ್ಥಾಪಕ ತಿಮ್ಮರಾಜು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶಿವಾನಂದಪ್ಪನನ್ನು ಬಂಧಿಸಲಾಗಿದ್ದು, ಬಸವರಾಜಪ್ಪ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸ್ತಿದ್ದ ಕಾರು ಅಪಘಾತ