ಬೆಂಗಳೂರು: ಮೀಟರ್ ಬಡ್ಡಿ ಸಂಗ್ರಹದ ದೂರುಗಳ ಕುರಿತು ಕೈಗೊಂಡ ಕ್ರಮದ ವಿಷಯದಲ್ಲಿ ರಾಜ್ಯ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, 7 ಲಕ್ಷದ 80 ಸಾವಿರಕ್ಕೂ ಹೆಚ್ಚು ದೂರುಗಳು ಬರುವವರೆಗೂ ನೀವು ಬಾಳೆಹಣ್ಣು ತಿನ್ನುತ್ತಾ ಇದ್ರಾ? ಎಷ್ಟು ಕ್ರಮ ಕೈಗೊಂಡಿದ್ದೀರಿ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು.
Advertisement
ಬೆಳಗಾವಿ ಒಂದೇ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 2,71,466 ದೂರುಗಳು, ಬಾಗಲಕೋಟೆ ಜಿಲ್ಲೆಯಲ್ಲಿ 89,087, ಬಿಜಾಪುರ-75 ಸಾವಿರ, ಮಂಡ್ಯ ಜಿಲ್ಲೆಯಲ್ಲಿ 42,500,- ಹೀಗೆ ಕರ್ನಾಟಕದಾದ್ಯಂತ ಜನರು ನಮ್ಮನ್ನು ಶೋಷಿಸುತ್ತಿದ್ದಾರೆ. ದೌರ್ಜನ್ಯ ನಡೆದಿದೆ ಎಂದು ದೂರು ಕೊಟ್ಟಿದ್ದಾರೆ. ಮನೆ ಖಾಲಿ ಮಾಡಿಸಿದ, ಮನೆಗೆ ಬೀಗ ಹಾಕಿದ ದೂರುಗಳೂ ಇವೆ ಎಂದು ವಿವರಿಸಿದರು. ಮೀಟರ್ ಬಡ್ಡಿ ಹಾವಳಿಯಿಂದ ಬಡವರು ಮನೆಗಳು, ಹಳ್ಳಿಗಳನ್ನು ಖಾಲಿ ಮಾಡಿ ತೆರಳುತ್ತಿದ್ದಾರೆ. ಬಡ್ಡಿ ವ್ಯವಹಾರ ಮಾಡುವವರು ದೌರ್ಜನ್ಯ ಮಾಡಿ, ಬಾರುಕೋಲಿನಿಂದ ಹೊಡೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಶೋಷಣೆ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಅವರೂ ಶಾಮೀಲಾಗಿದ್ದಾರೆ ಎಂದು ರವಿಕುಮಾರ್ ಆಕ್ಷೇಪಿಸಿದರು.
Advertisement
ಸಮರ್ಪಕ ಕ್ರಮ ಕೈಗೊಳ್ಳದೆ ಇದ್ದರೆ ಎರಡ್ಮೂರು ದಿನಗಳಲ್ಲಿ ರಾಜ್ಯದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ಅಂಬೇಡ್ಕರರ ವಿಚಾರಗಳನ್ನು ಜಾರಿ ಮಾಡುತ್ತೇವೆ. ಬಾಪೂ ಭಾರತ ಕಟ್ಟುತ್ತೇವೆ ಎಂದಿದ್ದಾರೆ. ಇದು ಬಾಪು ಭಾರತವೇ ಎಂದು ಕೇಳಿದರು.
Advertisement
ಮಹಿಳೆಯರು ನಿಮಗೆ ತಾಳಿ ಕಳಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ರಾಜ್ಯದ ಸಚಿವರಿಗೆ ನಾಚಿಕೆ ಆಗಬೇಕಲ್ಲವೇ? ಏನು ಕ್ರಮ ತೆಗೆದುಕೊಂಡಿದ್ದೀರಿ? ಬಡ್ಡಿ, ಮೀಟರ್ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಒಂದೆಡೆ ಆಗಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು, ಸಾವಿರಾರು ಮಕ್ಕಳ ಸಾವು ಸಂಭವಿಸುತ್ತಿದೆ. ಆಸ್ಪತ್ರೆಗಳು ಸರಿ ಇಲ್ಲ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸರಿ ಇಲ್ಲ. ಬ್ಯಾಂಕ್‍ಗಳು ಲೂಟಿ ಆಗುತ್ತಿವೆ. ಈ ಸರ್ಕಾರಕ್ಕೆ ಜೀವವೇ ಇಲ್ಲ ಎಂದು ಟೀಕಿಸಿದರು.
Advertisement
ಈ ಸರ್ಕಾರಕ್ಕೆ ಆಮ್ಲಜನಕ ನೀಡಬೇಕಿದೆ. ಒಂದು ರೀತಿಯ ಶವದ ವ್ಯವಸ್ಥೆಯಲ್ಲಿ ಈ ಸರಕಾರ ಇದೆ ಎಂದು ಆರೋಪಿಸಿದರು. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಛೀಮಾರಿ ಹಾಕಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‍ಗಳ ಹಾವಳಿಯು ಸಂಪೂರ್ಣ ಹಳಿ ತಪ್ಪಿದೆ. ಪರಿಣಾಮವಾಗಿ ರಾಜ್ಯದಲ್ಲಿ ಸಾಲ ತೆಗೆದುಕೊಳ್ಳುವ ಬಡವರ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.