ನವದೆಹಲಿ: ಇನ್ಮುಂದೆ ನಿರ್ಬಂಧ ಇಲ್ಲದೇ ಅನಿವಾಸಿ ಭಾರತೀಯರು(ಎನ್‌ಆರ್‌ಐ) ವಾರ್ಷಿಕವಾಗಿ 10 ಲಕ್ಷ ರೂ. ಕಳುಹಿಸಬಹುದು.
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ (FCRA) ಕೆಲವು ನಿಯಮಗಳಿಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿಗಳನ್ನು ಮಾಡಿದೆ. ದೇಣಿಗೆ ಮೊತ್ತ ಹೆಚ್ಚಳ ಮತ್ತು ಸ್ವೀಕಾರದ ಮಾಹಿತಿ ಸಲ್ಲಿಸುವ ಅವಧಿಯನ್ನು ಹೆಚ್ಚಿಸಲಾಗಿದೆ. ಈ ತಿದ್ದುಪಡಿಯಿಂದ ಸಂಬಂಧಿಕರಿಂದ ವಿದೇಶಿ ದೇಣಿಗೆ ಪಡೆಯುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಅನುಕೂಲವಾಗಲಿದೆ.
Advertisement
Advertisement
ತಿದ್ದುಪಡಿ ಏನು?
ಕೇಂದ್ರ ಗೃಹ ಸಚಿವಾಲಯ ಶುಕ್ರವಾರವೇ ಗೆಜೆಟ್ ಅಧಿಸೂಚನೆ ಪ್ರಕಟಿಸಿ 2022ರ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿದೆ. 2011ರ ವಿದೇಶಿ ದೇಣಿಗೆ ನಿಯಂತ್ರಣ ನಿಯಮಗಳ ಪ್ರಕಾರ ‘1 ಲಕ್ಷ ರೂಪಾಯಿ‘ ಪದವನ್ನು ‘10 ಲಕ್ಷ ರೂಪಾಯಿ‘ ಮತ್ತು ‘30 ದಿನಗಳು’ ಪದವನ್ನು ‘3 ತಿಂಗಳು‘ ಎಂದು ತಿದ್ದುಪಡಿ ಮಾಡಲಾಗಿದೆ.
Advertisement
ಈ ಮೊದಲು ಹಣಕಾಸು ವರ್ಷವೊಂದರಲ್ಲಿ ಯಾವುದೇ ವ್ಯಕ್ತಿಯು 1 ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಿದೇಶಿ ದೇಣಿಗೆಯನ್ನು ಸ್ವೀಕರಿಸಿದ್ದಲ್ಲಿ ದೇಣಿಗೆ ಪಡೆದ ದಿನದಿಂದ 30 ದಿನದ ಒಳಗೆ ಕೇಂದ್ರ ಸರಕಾರಕ್ಕೆ ಪೂರ್ಣ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ತಿದ್ದುಪಡಿಯಾದ ಬಳಿಕ ವಿದೇಶದಲ್ಲಿರುವ ಸಂಬಂಧಿಕರು ತಮ್ಮ ಕುಟುಂಬಸ್ಥರು ಅಥವಾ ಬೇರೆಯವರಿಗೆ ಕೇಂದ್ರದ ಗಮನಕ್ಕೆ ತರದೇ ಗರಿಷ್ಟ 10 ಲಕ್ಷ ರೂ.ವರೆಗೆ ದೇಣಿಗೆ ಕಳುಹಿಸಲು ಅನುಮತಿ ನೀಡಲಾಗಿದೆ. 10 ಲಕ್ಷ ರೂ.ಗಿಂತ ಹೆಚ್ಚಿನ ದೇಣಿಗೆ ಕಳಹಿಸಿದ್ದಲ್ಲಿ ದೇಣಿಗೆ ಸ್ವೀಕಾರದ ದಿನಾಂಕದಿಂದ 30 ದಿನಗಳ ಬದಲಿಗೆ 3 ತಿಂಗಳೊಳಗಾಗಿ ಕೇಂದ್ರಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
Advertisement
ದೇಣಿಗೆ ಸ್ವೀಕರಿಸಲು ‘ನೋಂದಣಿ’ ಮಾಹಿತಿ ಅಥವಾ ‘ಪೂರ್ವ ಅನುಮತಿ’ಗೆ ಸಂಬಂಧಿಸಿದಂತೆ ನಿಯಮ 9ಕ್ಕೆ ಕೂಡ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ದೇಣಿಗೆ ಪಡೆದ ಹಣದ ವಹಿವಾಟಿಗೆ ಬಳಸಲಾಗುವ ಬ್ಯಾಂಕ್ ಅಕೌಂಟ್ ಕುರಿತು 30 ದಿನದೊಳಗೆ ಕೇಂದ್ರಕ್ಕೆ ವಿವರ ಸಲ್ಲಿಸಬೇಕಿತ್ತು. ಈ ನಿಯಮವನ್ನು ಸಡಿಲಗೊಳಿಸಿದ್ದು, 45 ದಿನಗಳವರೆಗೆ ಹೆಚ್ಚಿಸಲಾಗಿದೆ. ಇದನ್ನು ಓದಿ: 12 ಸಾವಿರ NGOಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು
ಹೊಸ ನಿಯಮಗಳಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವ ಸಂಸ್ಥೆಗಳು ಆ ಮೊತ್ತದಲ್ಲಿ ಶೇ. 20ಕ್ಕಿಂತಲೂ ಹೆಚ್ಚಿನ ಹಣವನ್ನು ಆಡಳಿತಾತ್ಮಕ ಕೆಲಸಗಳಿಗೆ ಬಳಸುವಂತಿಲ್ಲ ಎಂಬ ಷರತ್ತನ್ನು ಸೇರಿಸಲಾಗಿದೆ. ಈ ಮೊದಲು ಇದರ ಮಿತಿ ಶೇ. 50 ರಷ್ಟಿತ್ತು.
ವಿದೇಶದಿಂದ ನೆರವು ಪಡೆದು ದೇಶದ ಒಳಗಡೆ ಉಗ್ರ ಚಟುವಟಿಕೆ, ರೈತರ ಪ್ರತಿಟಭನೆ, ಬಂದ್ ಇತ್ಯಾದಿ ಚಟುವಟಿಕೆಗಳಿಗೆ ಎನ್‍ಜಿಒಗಳ ಹಣ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ FCRA ಗೆ ತಿದ್ದುಪಡಿ ತಂದಿತ್ತು. ಎನ್‌ಜಿಒಗಳು ಯಾವುದೇ ರಾಜಕೀಯ ಪಕ್ಷಗಳ ಜೊತೆ ನೇರವಾದ ನಂಟು ಹೊಂದಿರಬಾರದು ಎಂದು ಸೂಚಿಸಲಾಗಿದೆ.
ವಿದೇಶದಿಂದ ಹಣ ಪಡೆಯುವ ಎನ್‍ಜಿಒಗಳು ದೆಹಲಿಯ ಎಸ್‍ಬಿಐ ಕಚೇರಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಹಣದ ಲೆಕ್ಕಪತ್ರ ಸಂಬಂಧ ಹಲವು ಬಿಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಎನ್‍ಜಿಒಗಳಿಗೆ ಗೃಹ ಇಲಾಖೆ ಸೂಚಿಸಿದೆ.