Connect with us

Bengaluru City

ಇಂದಿರಾನಗರದ ಮೆಟ್ರೋ ಪಿಲ್ಲರ್‌ ಬೇರಿಂಗ್‌ನಲ್ಲಿ ಬಿರುಕು

Published

on

ಬೆಂಗಳೂರು: ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿಕ ಇದೀಗ ಇಂದಿರಾನಗರ ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ.

ಬಿಎಂಆರ್‌ಸಿಎಲ್ ಕಳಪೆ ಕಾಮಗಾರಿಯಿಂದ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಮೂಡಿದೆ. ಆದರೆ ಪ್ರಯಾಣಿಕರನ್ನು ಕಣ್ಣತಪ್ಪಿಸಿ bmrcl ದುರಸ್ತಿ ಮಾಡುವುದಕ್ಕೆ ಹೊರಟಿದೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಬಿಎಂಆರ್‌ಸಿಎಲ್ ನಿರ್ಲಕ್ಷ್ಯದಿಂದ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಆರು ತಿಂಗಳ ಹಿಂದೆಯಷ್ಟೇ ಇದೇ ಮಾರ್ಗದಲ್ಲಿ ಮೆಟ್ರೋ ಸಮಸ್ಯೆ ಶುರುವಾಗಿತ್ತು. ಕಳೆದ ಬಾರಿ ಟ್ರಿನಿಟಿ ಸ್ಟೇಷನ್‍ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೆಟ್ರೋ ಮೊದಲ ಹಂತದ ಮೊದಲ ಫೇಸ್‍ನಲ್ಲಿ ಉದ್ಘಾಟನೆಯಾದ ಭಾಗ ಇದಾಗಿದೆ. ಆದರೆ ಇದೇ ಮಾರ್ಗದಲ್ಲಿ ಎರಡನೇ ಬಾರಿ ಸಮಸ್ಯೆ ಎದುರಾಗಿದೆ.

ಜುಲೈ 30 ರಂದು ಮೆಟ್ರೋ ಪ್ರತಿಕಾ ಪ್ರಕಟಣೆಯೊಂದನ್ನು ಹೊರಡಿಸಿತ್ತು. ನೆರಳೆ ಮಾರ್ಗದ ಎಂಜಿ ರೋಡ್‍ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿರ್ವಹಣೆ ಎಂದು ಮಾಹಿತಿ ನೀಡಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ನಿರ್ವಹಣೆ ಅಂತಷ್ಟೇ ಮಾಹಿತಿ ನೀಡಲಾಗಿತ್ತು. ಆದರೆ ಈಗ ಪಿಲ್ಲರ್ ಬೇರಿಂಗ್ ಸಮಸ್ಯೆ ಬಯಲಾಗಿದೆ.

ಪತ್ರಿಕಾ ಪ್ರಕಟಣೆಯಲ್ಲೇನಿತ್ತು..?
ನಿರ್ವಹಣೆ ಕೆಲಸಕ್ಕಾಗಿ ನೇರಳೆ ಮಾರ್ಗದಲ್ಲಿನ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಆಗಸ್ಟ್ 3ರ ರಾತ್ರಿ 9:30ರಿಂದ ಆ. 4ರ ಬೆಳಗ್ಗೆ 11:00 ಗಂಟೆವರೆಗೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುವುದಿಲ್ಲ.

ಆಗಸ್ಟ್ 3ರಂದು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ಸೇವೆಯ ಕೊನೆ ರೈಲು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ರಾತ್ರಿ 9:30 ಗಂಟೆಗೆ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗಿನ ಕೊನೆಯ ರೈಲು ರಾತ್ರಿ 9:00 ಗಂಟೆಗೆ ಹೊರಡಲಿದೆ.

ಅದಾಗ್ಯೂ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಆಗಸ್ಟ್ 3ರ ರಾತ್ರಿಯ ಸೇವೆ ಮುಕ್ತಾಯದವರೆಗೂ ಹಾಗೂ ಆ.4ರಂದು ಬೆಳಗ್ಗೆ 7:00 ಗಂಟೆಯಿಂದ 11:00 ಗಂಟೆಯವರೆಗೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುತ್ತವೆ.

ಆ. 4 ರಂದು ಬೆಳಗ್ಗೆ 11:00 ಗಂಟೆಯ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣದ ಮೆಟ್ರೋ ರೈಲಿನ ಸೇವೆಗಳು ದಿನನಿತ್ಯದಂತಿರುತ್ತವೆ. ಹಸಿರು ಮಾರ್ಗದ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನ ಸೇವೆಗಳು ನಿಗದಿಯಂತೆ ನಡೆಯುತ್ತವೆ.

Click to comment

Leave a Reply

Your email address will not be published. Required fields are marked *