– ಖಾಸಗಿ ಫೈನಾನ್ಸಿಯರ್ ಕಿರುಕುಳ ಆರೋಪ
ಬೆಂಗಳೂರು: ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಮೀಟರ್ ಬಡ್ಡಿ ದಂಧೆಕೋರರ ಮೇಲೆ ದಾಳಿ ನಡೆಸಿದ್ದರು. ದಾಳಿ ನಂತರವೂ ಎಚ್ಚೆತುಕೊಳ್ಳದ ದಂಧೆಕೋರರು ಬಡವರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಬಡ್ಡಿಕೋರರ ಹಾವಳಿಗೆ ಬೇಸತ್ತು ತಾಯಿ ಹಾಗೂ ಮಗ ಪ್ರಾಣ ಬಿಟ್ಟಿದ್ದಾರೆ.
ಹೆಚ್‍ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿ ಶನಿವಾರ ರಾತ್ರಿ ತಾಯಿ, ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಮೀಟರ್ ಬಡ್ಡಿ ದಂಧೆಕೋರರು ನನಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇವೆ ಎಂದು ಗೀತಾಬಾಯಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
Advertisement
Advertisement
ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಸಿಸಿಬಿ ಪೊಲೀಸರು ಬಡ್ಡಿ ದಂಧೆ ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫೈನಾನ್ಸರ್ ಗಳು ಮಾತ್ರ ಪೊಲೀಸರ ಕಣ್ಣಿಗೆ ಮಣ್ಣು ಎರಚಿ ತಮ್ಮ ವ್ಯವಹಾರ ಮುಂದುವರಿಸಿ ಜನರ ಪ್ರಾಣ ಹೀರುತ್ತಿದ್ದಾರೆ.
Advertisement
ಗೀತಾಬಾಯಿ ಹಾಗೂ ಸುರೇಶ್ ದಂಪತಿ ಮಗನ ಜೊತೆ ವಾಸವಿದ್ದು, ಕೆಲಸ ಮಾಡುತ್ತಿದ್ದರು. ಸುರೇಶ್ ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಗೀತಾಬಾಯಿ ಅವರು ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬವರ ಬಳಿ ಎರಡು ವರ್ಷಗಳ ಹಿಂದೆ 40 ಸಾವಿರ ರೂ. ಸಾಲ ಪಡೆದಿದ್ದರು. ಕೆಲವು ದಿನಗಳನಲ್ಲಿ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ದರು. ಆದರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾ ಬಾಯಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದಾಗಿ ಪತಿ ಸುರೇಶ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗೀತಾಬಾಯಿ ಫೈನಾನ್ಸಿಯರ್ ಸುಧಾ ವಿರುದ್ಧ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್‍ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.