ಭಾರತ (India) ಸರ್ಕಾರ ಸೋಶಿಯಲ್ ಮೀಡಿಯಾ ಕಂಪನಿಗಳ ಮೇಲೆ ಹೊಸ ನಿಯಮಗಳನ್ನು ಪರಿಷ್ಕರಿಸಿದ ಬಳಿಕ, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ (Whatsapp) ಆಗಸ್ಟ್‌ನಲ್ಲಿ ಸುಮಾರು 74.2 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ವಾಟ್ಸಪ್ ಈ ನಿರ್ಧಾರ ಕೈಗೊಂಡಿದೆ.
ಹೊಸ ಐಟಿ ನಿಯಮದ (IT Act 2021) ಅನ್ವಯ ಪ್ರತಿ ತಿಂಗಳ ವರದಿ ನೀಡುವ ವಾಟ್ಸಪ್ ಇದೀಗ ಆಗಸ್ಟ್ 2023ರ ಮಾಸಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಹಿಂದೆಂದಿಗಿಂತಲೂ ಈ ಬಾರಿಯ ಮಾಸಿಕ ವರದಿಯಲ್ಲಿ ಭಾರತೀಯರ ವಾಟ್ಸಪ್ ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಷೇಧಿಸಲಾಗಿದೆ. ಹೊಸ ಐಟಿ ನಿಯಮ 2021ರ ನಿಯಮ 4(1)(ಡಿ) ಯ ಅನುಸಾರವಾಗಿ ವಾಟ್ಸಪ್ ಖಾತೆಗಳನ್ನು ಬ್ಲಾಕ್ ಮಾಡಿದೆ. ಹೀಗೆ ಬ್ಲಾಕ್ ಮಾಡಿದ ಖಾತೆಗಳಲ್ಲಿ ಬಳಕೆದಾರರಿಂದ ಸ್ವೀಕರಿಸಿದ ಕುಂದುಕೊರತೆಗಳ ರಿಪೋರ್ಟ್‌ಗಳು ಸೇರಿವೆ. ಬಳಕೆದಾರರಿಂದ ಪಡೆದ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವರದಿ ಮಾಡಿದೆ.
Advertisement
ಅಹಿತಕರ ಸಂದೇಶ ತಡೆಗಟ್ಟುವಲ್ಲಿ ಮತ್ತು ಎದುರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸುರಕ್ಷತಾ ವೈಶಿಷ್ಟ್ಯತೆಗಳು ಮತ್ತು ನಿಯಂತ್ರಣಗಳ ಜೊತೆಗೆ ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ತಜ್ಞರನ್ನು ನೇಮಿಸಿಕೊಳ್ಳುವುದಾಗಿ ವಾಟ್ಸಪ್ ತಿಳಿಸಿದೆ.
Advertisement
Advertisement
ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಈ ನಿಯಮಗಳು ಅವಶ್ಯಕವಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಈ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರ ಸೋಶಿಯಲ್ ಮೀಡಿಯಾ ಕಂಪನಿಗಳು ಹಾಗೂ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರ ನಡುವೆ ನಿಯಮಗಳಿಗೆ ಹೊಸ ಪರಿಷ್ಕರಣೆಯನ್ನು ಸರ್ಕಾರ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕಿದೆ.
Advertisement
ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ, ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂತಹ ಸುದ್ದಿಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‍ಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ವಾಟ್ಸಪ್ ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚುವಲ್ಲಿ ವಿಫಲವಾದರೆ ದೇಶದಲ್ಲಿ ವಾಟ್ಸಪ್ ನಿಷೇಧಕ್ಕೆ ಒಳಗಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಲಾಗಿದೆ. ಆದರೆ ಕೇಂದ್ರದ ಬೇಡಿಕೆಗೆ ವಾಟ್ಸಪ್ ಸಮ್ಮತಿ ಸೂಚಿಸಿರಲಿಲ್ಲ. ಬದಲಾಗಿ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ ಎಂದು ಹೇಳಿಕೊಂಡಿತ್ತು. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಅದನ್ನು ಮೀರಲಾಗದು ಎಂದು ಕಂಪನಿ ಸ್ಪಷ್ಟಪಡಿಸಿತ್ತು.
ವಾಟ್ಸಪ್ ಬಳಸಿ ಕಳುಹಿಸಲಾಗುವ ಎಲ್ಲಾ ಸಂದೇಶಗಳು ಎಂಡ್ ಟು ಎಂಡ್ ಎನ್‍ಕ್ರಿಪ್ಷನ್‍ಗೆ ಒಳಪಟ್ಟಿವೆ. ಇದರಿಂದ ಸಂದೇಶ ಸೋರಿಕೆಯಾಗುವುದಿಲ್ಲ. ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಾಟ್ಸಪ್ ಹೇಳಿತ್ತು. ಆದರೆ ದೇಶದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ವಾಟ್ಸಪ್ ಮೂಲಕ ಹರಡಲಾದ ಸಂದೇಶಗಳೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿತ್ತು. ಹೀಗಾಗಿ ಅದನ್ನು ಪತ್ತೆ ಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಅನೇಕ ತಂತ್ರಜ್ಞಾನ ಮಧ್ಯವರ್ತಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರ್ಕಾರ ಹೇಳಿತ್ತು. ಯಾವುದೇ ನಿರ್ಧಿಷ್ಟ ಕಂಪನಿ ಅಥವಾ ನಿರ್ಧಿಷ್ಟ ವಿಚಾರವನ್ನು ಹೇಳದೇ ಕೇವಲ ಮಾಹಿತಿಯನ್ನು ಉಲ್ಲೇಖಿಸಿತ್ತು. ಈ ವಿಚಾರವಾಗಿ ಟ್ವಿಟ್ಟರ್ ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರೊಂದಿಗೆ ಫೇಸ್‍ಬುಕ್ ಮತ್ತು ಯೂಟ್ಯೂಬ್ ನಡುವೆಯೂ ಆಗಾಗ ತಿಕ್ಕಾಟ ನಡೆಯುತ್ತಿದೆ.
ಈ ಹಿಂದೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಖಾತೆಗಳ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರ ಟ್ವಿಟ್ಟರ್‌ರ್‌ಗೆ ಹೇಳಿತ್ತು. ಆದರೆ ಟ್ವಿಟ್ಟರ್ ಸರ್ಕಾರ ಹೇಳಿದ ಆದೇಶಗಳನ್ನು ಸಂಪೂರ್ಣವಾಗಿ ಅನುಸರಿಸಲು ನಿರಾಕರಿಸಿತ್ತು. ಇದರಿಂದ ಟ್ವಿಟ್ಟರ್ ಭಾರತದಲ್ಲಿ ಹಿನ್ನಡೆಯನ್ನು ಕೂಡ ಅನುಭವಿಸುತ್ತಿದೆ.
ಏನಿದು ಮಾಹಿತಿ ತಂತ್ರಜ್ಞಾನ ಕಾಯ್ದೆ – 2021
ಮಾಹಿತಿ ತಂತ್ರಜ್ಞಾನ ಕಾಯ್ದೆ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆಯಾಗಿದೆ. 2021 ಭಾರತ ಸರ್ಕಾರ ಇದನ್ನು ತಿದ್ದುಪಡಿ ಮಾಡಿತು.
ಈ ಹೊಸ ನಿಯಮದ ಪ್ರಕಾರ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಕುಂದುಕೊರತೆ ನಿವಾರಣಾ ಕಚೇರಿಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಇದರ ಅನ್ವಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅಧಿಕಾರಿ ಮತ್ತು ಸಂಪರ್ಕ ಅಧಿಕಾರಿಯನ್ನು ನೇಮಿಸಬೇಕು. ಅವರು ಕಾನೂನು ಜಾರಿ ಸಂಸ್ಥೆಗಳೊಂದಿಗೆ 24/7 ಸಂಪರ್ಕದಲ್ಲಿರಬೇಕು. ದಾಖಲಾದ ದೂರುಗಳನ್ನು ಅವರು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು.
ಸಾಮಾಜಿಕ ಮಾಧ್ಯಮ ಬಳಕೆದಾರರ ಘನತೆಗೆ ವಿರುದ್ಧವಾಗಿ ದೂರುಗಳಿದ್ದರೆ, ನಿರ್ದಿಷ್ಟವಾಗಿ ಮಹಿಳೆಯರು – ವ್ಯಕ್ತಿಗಳ ಖಾಸಗಿ ಭಾಗಗಳು, ನಗ್ನತೆ ಅಥವಾ ಲೈಂಗಿಕ ಕ್ರಿಯೆ ಇತ್ಯಾದಿಗಳ ಬಗ್ಗೆ ದೂರುಗಳಿದ್ದರೆ 24 ಗಂಟೆಗಳ ಒಳಗೆ ಅಂತಹ ವಿಷಯವನ್ನು ತೆಗೆದುಹಾಕಬೇಕು. ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವೀಕರಿಸಿದ ದೂರುಗಳ ಸಂಖ್ಯೆ ಮತ್ತು ಪರಿಹಾರದ ಸ್ಥಿತಿಯ ಮಾಸಿಕ ವರದಿಯನ್ನು ಸಲ್ಲಿಸಬೇಕು.
ಸುದ್ದಿ ಪ್ರಕಾಶಕರಿಗೆ ಮೂರು ಹಂತದ ನಿಯಂತ್ರಣವಿರುತ್ತದೆ. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಣ ಸಂಸ್ಥೆ, ಇದು ನಿವೃತ್ತ ನ್ಯಾಯಾಧೀಶರು ಅಥವಾ ಅಧಿಕಾರಿಗಳ ನೇತೃತ್ವ ವಹಿಸುತ್ತದೆ. ಇದರ ಜೊತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೇಲ್ವಿಚಾರಣೆ ಇರಲಿದೆ.
50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು `ಉನ್ನತ ಸಾಮಾಜಿಕ ಮಾಧ್ಯಮಗಳು’ ಎಂದು ಪರಿಗಣಿಸಲಾಗುತ್ತದೆ. ಅವರು ನಿಯಮಗಳನ್ನು ಅನುಸರಿಸದಿದ್ದರೆ ನಿಷೇಧವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ – 2000
ಇದು ಇ-ಕಾಮರ್ಸ್ ಮತ್ತು ಸೈಬರ್ ಕ್ರೈಮ್‍ಗಳ ಕುರಿತು ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನುಗಳನ್ನು ಹೊಂದಲು ಕಡ್ಡಾಯವಾಯಿತು. ಇದರ ನಂತರ ಭಾರತ ಸರ್ಕಾರ 2000 ರಲ್ಲಿ ಐಟಿ ಕಾಯ್ದೆಯನ್ನು ಅಂಗೀಕರಿಸಿತು. ಭಾರತವು ಸೈಬರ್ ಅಪರಾಧಗಳಿಗೆ ಕಾನೂನನ್ನು ಅಂಗೀಕರಿಸಿದ ವಿಶ್ವದ 12 ನೇ ರಾಷ್ಟ್ರವಾಯಿತು.
ಈ ಕಾಯಿದೆಯ ಮುಖ್ಯ ಉದ್ದೇಶ:
ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವ ಎಲ್ಲಾ ವಹಿವಾಟುಗಳನ್ನು ರಕ್ಷಿಸುವುದು. ಯಾವುದೇ ರೀತಿಯ ಕಾನೂನು ದೃಢೀಕರಣಕ್ಕಾಗಿ ಬಳಸಲಾಗುವ ಡಿಜಿಟಲ್ ಸಹಿಗಳನ್ನು ಗುರುತಿಸುವುದು. ಸೈಬರ್ ವಿಚಾರವಾಗಿ ಮದ್ಯವರ್ತಿಗಳ ನಿಯಂತ್ರಣ ಮತ್ತು ಸೈಬರ್ ಅಪರಾಧದಿಂದ ನಾಗರಿಕರನ್ನು ರಕ್ಷಿಸುವುದಾಗಿದೆ.
Web Stories