– ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪುಂಡರು
ಬೆಳಗಾವಿ: ನಗರದಲ್ಲಿ ಎಂಇಎಸ್ ಪುಂಡರ ಹಾವಳಿ ಮತ್ತೆ ಮುಂದುವರಿದಿದೆ. ಮರಾಠಿಯಲ್ಲಿ ಪಹಣಿ ಕೊಡಲಿಲ್ಲ ಎಂದು ಕನ್ನಡಿಗ ಕಾರ್ಯದರ್ಶಿ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕನ್ನಡದ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ ಸಂಚಲನ ಮೂಡಿಸಿತ್ತು. ಈ ಘಟನೆ ಮಾಸುವ ಮುನ್ನವೇ ಕುಂದಾನಗರಿಯಲ್ಲಿ ಮತ್ತೊಂದು ಘಟನೆ ನಡೆದಿದೆ.
ಮರಾಠಿಯಲ್ಲಿ ಪಹಣಿ ಕೊಡಲಿಲ್ಲ ಹಾಗೂ ಅವರ ಕಾನೂನು ಬಾಹಿರ ಕೃತ್ಯಕ್ಕೆ ಸಹಕಾರ ನೀಡಲಿಲ್ಲ ಎಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಎಂಇಎಸ್ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಬೆವಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾಗಪ್ಪಾ ಕೊಡಲಿ ಹಲ್ಲೆಗೊಳಗಾದವರು.
ಮಹಾರಾಷ್ಟ್ರ ಎಕೀಕರಣ ಸಮಿತಿಯ ಸಕ್ರಿಯ ಜಿಲ್ಲಾ ಸಂಚಾಲಕ ಚೇತನ ಪಾಟೀಲ ಹಾಗೂ ವಿಕ್ರಂ ಯಳ್ಳೂರಕರ್ ಬೆಂಬಲಿಗರು ಕೃತ್ಯ ಎಸಗಿದ್ದಾರೆ. ತಲೆಗೆ ಹಾಗೂ ಕಾಲುಗಳಿಗೆ ರಾಡ್‌ನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಾಗಪ್ಪಾರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಚ್ಚು-ಲಾಂಗು ಮಾರಕಾಸ್ತ್ರಗಳಿಂದ ಗೋಜಗಾ ಗ್ರಾಮದ ಬಳಿ ನಡು ರಸ್ತೆಯಲ್ಲಿಯೇ ಮನಸೋ ಇಚ್ಛೆ ಥಳಿಸಿದ್ದಾರೆ.
ಚೇತನ ಪಾಟೀಲ ಅಂಬೆವಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ. ಹಾಲಿ ಅಧ್ಯಕ್ಷರ ಮಗ ವಿಕ್ರಂ ಯಳ್ಳೂರಕರ್ ಧಮ್ಕಿ ಹಾಕುತ್ತಿರುವ ಆಡಿಯೋ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ.
ನಾವು ಹೇಳಿದ ಹಾಗೆ ಕೆಲಸ ಮಾಡು. ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ. ನಾವೆಲ್ಲಾ ಸೇರಿ ನೀವು ಐವತ್ತು ಸಾವಿರ ಲಂಚ ಪಡೆಯುತ್ತಿದ್ದೀರಿ ಎಂದು ಹೇಳಿ ಏನ್ ಬೇಕಾದರೂ ಮಾಡಬಹುದು ಎಂದು ಧಮ್ಕಿ ಹಾಕಿದ್ದಾರೆ. ನಾಡದ್ರೋಹಿ ಎಂಇಎಸ್ ಗೂಂಡಾಗಳನ್ನು ತಕ್ಷಣವೇ ಬಂಧಿಸಬೇಕು ಹಾಗೂ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಕನ್ನಡಪರ ಸಂಘಟನೆಗಳಿAದ ಎಚ್ಚರಿಕೆ ರವಾನೆಯಾಗಿದೆ.