ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಹತ್ತಿದ ಅಪರಿಚಿತ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಬಿನ್ನಿ ಮಿಲ್ ಬಳಿ ನಡೆದಿದೆ.
ಶ್ರೀನಗರದಿಂದ ಯಶವಂತಪುರಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಗಲಾಟೆ ನಡೆದಿದ್ದು, ಬಿನ್ನಿ ಮಿಲ್ ಬಳಿ ಬಸ್ ಹತ್ತಿದ ಅಪರಿಚಿತ ಚಾಕುವಿನಿಂದ ಹಲ್ಲೆ ನಡೆಸಿ, ರಾಡ್‍ನಿಂದ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ್ದಾನೆ.
ಆರೋಪಿ ಮಾದಕ ದ್ರವ್ಯ ಸೇವಿಸಿ ಇದೇ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುವ ಮುನ್ನ ಆತ ಸ್ಥಳೀಯ ವ್ಯಾಪಾರಿಯೊಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಎಂಬ ಮಾಹಿತಿ ಸಿಕ್ಕಿದೆ.
ಘಟನೆಯಲ್ಲಿ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ವರ್ತನೆಯಿಂದ ಬೆಸ್ತು ಬಿದ್ದ ಪ್ರಯಾಣಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಆತ ಕೂಡ ಗಾಯಗೊಂಡಿದ್ದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.