ರಾಮನಗರ: ಮಾನಸಿಕ ಅಸ್ವಸ್ಥನೋರ್ವ ಹೈಟೆನ್ಷನ್ ವಿದ್ಯುತ್ ಕಂಬವೇರಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ರಂಪಾಟ ನಡೆಸಿದ್ದು, ಆತನನ್ನು ಕೆಳಗಿಳಿಸಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿರುವ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಸುಮಾರು 35 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಬೆಳಿಗ್ಗೆ 9ಗಂಟೆ ವೇಳೆಗೆ ತಿಪ್ಪಸಂದ್ರ ಗ್ರಾಮದ ಹೊರವಲಯದಲ್ಲಿನ ಹೈಟೆನ್ಷನ್ ವಿದ್ಯುತ್ ಕಂಬವನ್ನು ಏರಿದ್ದಾನೆ. ಬೆಳಿಗ್ಗೆ ಆತ ಹೈಟೆನ್ಷನ್ ಕಂಬವೇರುತ್ತಿರುವುದನ್ನ ಕಂಡ ಸ್ಥಳೀಯರು ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯುತ್ ಕಡಿತಗೊಳಿಸಲಾಗಿದೆ. ಇದೇ ವೇಳೆ ವಿದ್ಯುತ್ ಕಂಬದ ತುತ್ತ ತುದಿಗೇರಿದ ವ್ಯಕ್ತಿ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದನು. ಆದರೆ ವಿದ್ಯುತ್ ಕಡಿತಗೊಂಡಿದ್ದ ಕಾರಣಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ.
Advertisement
Advertisement
ಹೈಟೆನ್ಷನ್ ಕಂಬವೇರಿದ ವ್ಯಕ್ತಿ ಸುಮಾರು ನಾಲ್ಕು ಗಂಟೆಗಳ ಕಾಲ ಕಂಬದ ಮೇಲೆಯೇ ಕುಳಿತ್ತಿದ್ದನು. ಅಲ್ಲದೇ ವಿದ್ಯುತ್ ತಂತಿಯನ್ನ ಹಿಡಿದು ಮಧ್ಯಕ್ಕೆ ಸಾಗುವ ಯತ್ನವನ್ನು ಕೂಡ ನಡೆಸಿದ್ದನು. ಸಾರ್ವಜನಿಕರು ಆತನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಆತ ಮಾತ್ರ ಕೆಳಗಿಳಿಯಲಿಲ್ಲ. ಅಲ್ಲದೇ ಕೆಲವು ಬಾರಿ ಅರ್ಧ ಕಂಬ ಇಳಿದು ಮತ್ತೆ ಕಂಬದ ತುತ್ತ ತುದಿಗೇರಿ ಕುಳಿತುಕೊಳ್ಳುತ್ತಿದ್ದನು. ಕಂಬವನ್ನ ಯಾರಾದರೂ ಸಾರ್ವಜನಿಕರು ಹತ್ತಲು ಮುಂದಾದರೆ ಕಂಬದಿಂದ ತಂತಿಯ ಮೇಲೇರಿ ಹೆದರಿಸುತ್ತಿದ್ದನು.
Advertisement
ಮಾಹಿತಿ ತಿಳಿದ ಬಳಿಕ ಕುದೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಾನಸಿಕ ಅಸ್ವಸ್ಥನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತ ತನ್ನ ಸ್ಥಿಮಿತ ಕಳೆದುಕೊಂಡಿರುವ ಹಿನ್ನೆಲೆ ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.