– ಹಳ್ಳ ದಾಟಲು ಶಾಲಾ ಮಕ್ಕಳು ಹರಸಾಹಸ
ಹಾವೇರಿ: ಹಳ್ಳದಲ್ಲಿ ನೀರು ಹರಿಯುತ್ತಿರೋ ಕಾರಣ ಆಸ್ಪತ್ರೆಗೆ ಹೋಗುವ ವಯೋವೃದ್ಧೆಯನ್ನು ಹೊತ್ತುಕೊಂಡು ಹಳ್ಳವನ್ನು ದಾಟಿಸುವ ಹೃದಯ ವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ಬಳಿ ನಡೆದಿದೆ.
ಹಳ್ಳಕ್ಕೆ ಮೇಲ್ಸೇತುವೆ ಇಲ್ಲದ ಕಾರಣ ಹಳ್ಳ ದಾಟಲು ಜನರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೊರವಲಯದಲ್ಲಿ ತುಂಗಾ ಮೇಲ್ದಂಡೆ ಕಾಲುವೆ ನೀರು ತುಂಬಿ ಹರಿಯೋದ್ರಿಂದ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತದೆ.
ಆಗ ಗ್ರಾಮದಿಂದ ಬೇರೆ ಕಡೆ ತೆರಳಲು ಆಸ್ಪತ್ರೆಗೆ ಹೋಗುವ ವೃದ್ಧರು ಮತ್ತು ಶಾಲಾ ಮಕ್ಕಳು ಹರಸಾಹಸ ಪಡುತ್ತಾರೆ. ವೃದ್ಧರನ್ನು ಯುವಕರು ಹೊತ್ತುಕೊಂಡು ಹಳ್ಳ ದಾಟಿಸಬೇಕಾದ ದುಃಸ್ಥಿತಿ ಎದುರಾಗಿದೆ. ಸಾಕಷ್ಟು ಬಾರಿ ಗ್ರಾಮಸ್ಥರು ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದರು ಪ್ರಯೋಜನವಾಗಿಲ್ಲ.
ಈ ಗ್ರಾಮ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಇನ್ನಾದರೂ ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರು ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.