ನವದೆಹಲಿ: ಮದ್ಯಪಾನ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಇಬ್ಬರು ಯುವಕರು ಸೇರಿ ನೆರೆಯ ಮನೆಯ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನವದೆಹಲಿಯ ಶಕುರ್ಪುರದಲ್ಲಿ ನಡೆದಿದೆ.
ಮದ್ಯ ಖರೀದಿಸಲು ಹಣ ನೀಡದ ಚಂದರ್ ಖಾನ್‍ನನ್ನು ಶಕುರ್ಪುರದ ನಿವಾಸಿಗಳಾದ ಗಿರಿ ರಾಜ್ ಮತ್ತು ಪವನ್ ಕತ್ತು ಹಿಸುಕಿ ಹತ್ಯೆ ಮಾಡಿ ಜಿಲ್ಲಾ ಉದ್ಯಾನವನದ ಪೊದೆಯೊಳಗೆ ಎಸೆದು ಹೋಗಿದ್ದಾರೆ.
ಪಾರ್ಕಿನಲ್ಲಿ ಮೃತ ದೇಹವೊಂದನ್ನು ಕಂಡು ತನಿಖೆ ಆರಂಭ ಮಾಡಿದ ಪೊಲೀಸರು ಮೃತ ಚಂದರ್ ಖಾನ್ ಅವರ ಸಹೋದರಿ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಚಂದರ್ ಖಾನ್ ಹತ್ತಿರ ಮದ್ಯ ಖರೀದಿಸಲು ಹಣ ಕೇಳಿದ್ದಾರೆ. ಈ ವೇಳೆ ಹಣ ಕೊಡಲು ನಿರಾಕರಿಸಿದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಚಂದರ್ ಖಾನ್ ಸಹೋದರಿ ನೀಡಿದ ಮಾಹಿತಿ ಮೇರೆಗೆ ಈಗ ಇಬ್ಬರನ್ನು ಬಂಧಿಸಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.