ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ISIS) ಮಾಡ್ಯೂಲ್‌ನ ಪ್ರಮುಖ ಸದಸ್ಯ ರಿಜ್ವಾನ್ ಅಬ್ದುಲ್ ಹಾಜಿ ಅಲಿಯನ್ನು ದೆಹಲಿ ಪೊಲೀಸರ ವಿಶೇಷ ಸೆಲ್ (Delhi Police Speical Cell) ಶುಕ್ರವಾರ (ಆ.9) ಮುಂಜಾನೆ ಬಂಧಿಸಿದೆ.
ಪುಣೆ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಲಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ಅಲಿ, ಪುಣೆ ಐಸಿಸ್ ಮಾಡ್ಯೂಲ್‌ನ (ISIS Module) ಇತರ ಸದಸ್ಯರೊಂದಿಗೆ ದೆಹಲಿ ಮತ್ತು ಮುಂಬೈನಲ್ಲಿ (Mumbai) ವಿಧ್ವಂಸಕ ಕೃತ್ಯ ಎಸಗಲು ಹಲವಾರು ಪ್ಲ್ಯಾನ್ ಮಾಡಿದ್ದನು ಎಂದು ಆರೋಪಿಸಲಾಗಿದೆ.
ಬಂಧನದ ವೇಳೆ ಅಲಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪುಣೆ ಐಸಿಸ್ ಮಾಡ್ಯೂಲ್‌ನ ಹಲವಾರು ಸದಸ್ಯರನ್ನು ಈ ಹಿಂದೆ ಪುಣೆ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿತ್ತು.
ಈ ಹಿಂದೆಯೇ 11 ಆರೋಪಿಗಳ ಬಂಧನ:
ಮಹಾರಾಷ್ಟ್ರದ ಪುಣೆಯಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ರಾಸಾಯನಿಕಗಳು ಮತ್ತು ಐಸಿಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2023 ರಲ್ಲಿ ಎನ್‌ಐಎ ಒಟ್ಟು 11 ಆರೋಪಿಗಳನ್ನು ಬಂಧಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಇತರ ಮೂವರು ಆರೋಪಿಗಳೊಂದಿಗೆ ರಿಜ್ವಾನ್ ಅಲಿಯನ್ನು ಹೆಸರಿಸಲಾಗಿತ್ತು.
ಎಲ್ಲಾ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸದಸ್ಯರಾಗಿದ್ದರು. ಹಾಗೂ ಎನ್‌ಐಎ ಪ್ರಕಾರ, ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ದೊಡ್ಡ ಪಿತೂರಿಯ ಭಾಗವಾಗಿ ಪುಣೆ ಮತ್ತು ಸುತ್ತಮುತ್ತ ಭಯೋತ್ಪಾದನೆಯ ಯೋಜನೆಗಳಲ್ಲಿ ಭಾಗಿಯಾಗಿದ್ದರು. ಈ ವ್ಯಕ್ತಿಗಳು ಪುಣೆಯ ಕೊಂಧ್ವಾದಲ್ಲಿ ಐಇಡಿ ಫ್ಯಾಬ್ರಿಕೇಶನ್ ತರಬೇತಿಯನ್ನು ಪಡೆದಿದ್ದರು ಮತ್ತು ನಿಯಂತ್ರಿತ ಸ್ಫೋಟವನ್ನು ಸಹ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.
ಪಶ್ಚಿಮ ಘಟ್ಟದ ಪ್ರದೇಶಗಳನ್ನು ಅಡಗುತಾಣ ಮಾಡಿಕೊಂಡಿದ್ದರು. ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಹಾರಾಷ್ಟ್ರ ಮತ್ತು ಗುಜರಾತ್‌ನಾದ್ಯಂತ ನಗರಗಳಲ್ಲಿ ಸ್ಥಳಗಳನ್ನು ಪರಿಶೀಲಿಸಿದ್ದರು. ಅಲ್ಲದೇ ಭಯೋತ್ಪಾದಕ ದಾಳಿಗೆ ಶೂಟಿಂಗ್ ತರಬೇತಿಯನ್ನೂ ಪಡೆದಿದ್ದರು ಎಂದು ಎನ್‌ಐಎ ತಿಳಿಸಿದೆ.