Connect with us

Districts

ರೈತ ಮುಖಂಡ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ- ಅಂತಿಮ ದರ್ಶನ ಪಡೆದ ನಟ ದರ್ಶನ್

Published

on

ಮಂಡ್ಯ: ರೈತ ಬಂಧು, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ನಿಧನರಾಗಿದ್ದಾರೆ. ರೈತರಿಗಾಗಿಯೇ ಬದುಕ ಸವೆಸಿದ ಮಾಣಿಕ್ಯವೊಂದು ಮರೆಯಾಗಿದೆ. ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದಂತೆ ಕುಸಿದುಬಿದ್ದ ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಮಕ್ಕಳು ವಿದೇಶದಿಂದ ಆಗಮಿಸುವ ಹಿನ್ನೆಲೆಯಲ್ಲಿ ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ರೈತ ಬಂಧು, ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ವತಃ ಕಬಡ್ಡಿಪಟು, ಕುಸ್ತಿ ಪಟುವಾಗಿದ್ದ ಪುಟ್ಟಣ್ಣಯ್ಯ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ ಗೆದ್ದ ತಂಡವನ್ನು ಸನ್ಮಾನಿಸಲು ಪುಟ್ಟಣ್ಣಯ್ಯ ವೇದಿಕೆ ಮೇಲೆ ಆಸೀನರಾಗಿದ್ದರು. ಅಭಿಮಾನಿಗಳು, ಸ್ಥಳೀಯ ಮುಖಂಡರೊಂದಿಗೆ ಕುಳಿತು ಖುಷಿಯಾಗಿಯೇ ಪಂದ್ಯ ವೀಕ್ಷಿಸಿದ್ದ ಪುಟ್ಟಣ್ಣಯ್ಯರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತು.

ಆದ್ರೆ ವಿಧಿ ಅದಾಗಲೇ ಪುಟ್ಟಣ್ಣಯ್ಯ ಬದುಕಿನ ಹೋರಾಟವನ್ನು ಕಿತ್ತುಕೊಂಡು ಬಿಟ್ಟಿತ್ತು. ಬಳಿಕ ಪುಟ್ಟಣ್ಣಯ್ಯ ಮೃತದೇಹವನ್ನು ಹುಟ್ಟೂರು ಕ್ಯಾತನಹಳ್ಳಿಗೆ ರವಾನಿಸಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಮುಗಿಬಿದ್ದರು. ಇನ್ನು ನಟ ದರ್ಶನ್ ರಾತ್ರೋರಾತ್ರಿ ಪುಟ್ಟಣ್ಣಯ್ಯರ ಅಂತಿಮ ದರ್ಶನ ಪಡೆದರು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಅಗಲಿದ ರೈತ ನಾಯಕನ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ, ಅಂಬರೀಶ್, ಎಸ್.ಎಂ.ಕೃಷ್ಣ, ವಾಟಾಳ್ ನಾಗರಾಜ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ನಾಳೆ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಕ್ಯಾತನಹಳ್ಳಿಯಲ್ಲೇ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಇನ್ನು ರಾತ್ರಿಯೇ ಪುಟ್ಟಣ್ಣಯ್ಯ ಪುತ್ರ ದರ್ಶನ್ ಆಗಮಿಸಿದ್ದು, ಅಮೆರಿಕಾದಲ್ಲಿರುವ ಇಬ್ಬರು ಪುತ್ರಿಯರು ಇಂದು ಆಗಮಿಸಲಿದ್ದಾರೆ. ಒಟ್ಟಾರೆ ಶಾಸಕನಾಗಿದ್ದರೂ ಸರಳಜೀವಿಯಾಗಿಯೇ ಬದುಕಿದ ರೈತ ಕೊಂಡಿಯೊಂದು ಅಸ್ತಂಗತವಾಗಿದೆ. ರೈತ ದನಿಯೊಂದು ಮೌನವಾಗಿದೆ.

https://twitter.com/divyaspandana/status/965296481681989634

Click to comment

Leave a Reply

Your email address will not be published. Required fields are marked *