– ಭರಾಟೆ ಚಿತ್ರಕ್ಕಾಗಿ ತಾತ್ಕಾಲಿಕವಾಗಿ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ
– ಒಂದು ಶಕ್ತಿಕೇಂದ್ರದಲ್ಲಿ ಮತ್ತೊಂದು ದೇವರನ್ನು ಸ್ಥಾಪಿಸುವುದು ಎಷ್ಟು ಸರಿ?
ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆಗೂ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಇಲ್ಲಿರುವ ದೇವಾಲಯಗಳು, ಆಕರ್ಷಕವಾದ ಲೊಕೇಷನ್ ಗಳು ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡು ಭರ್ಜರಿ ಯಶಸ್ಸು ಸಾಧಿಸಿವೆ. ಆದರೆ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮೇಲುಕೋಟೆಯಲ್ಲಿ ನಡೆಯುವ ಪೂಜೆಗಳಿಗೆ ತೊಂದರೆಯಾಗುತ್ತಿದ್ದು, ಸ್ಥಳ ಮಹಿಮೆಗೆ ಅಪಚಾರವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಧಾರ್ಮಿಕವಾಗಿ, ಐತಿಹಾಸಿಕವಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರ ಸಿನಿಮಾ ನಿರ್ಮಾಣ ಮಾಡುವವರಿಗೂ ಅಚ್ಚುಮೆಚ್ಚಾಗಿದ್ದು ಇಲ್ಲಿ ಸಾಕಷ್ಟು ಚಿತ್ರಗಳು ಶೂಟಿಂಗ್ ನಡೆಯುತ್ತಿರುತ್ತವೆ. ಆಗೆಲ್ಲಾ ಇರದ ಪಾವಿತ್ರ್ಯತೆಯ ಪ್ರಶ್ನೆ ಈಗ ಕಾಡಲಾರಂಭಿಸಿದೆ.
Advertisement
Advertisement
ಕಳೆದ ಕೆಲವು ದಿನಗಳಿಂದ ನಟ ಶ್ರೀ ಮುರುಳಿ ನಟಿಸುತ್ತಿರುವ `ಭರಾಟೆ’ ಚಿತ್ರ ಶೂಟಿಂಗ್ ಮೇಲುಕೋಟೆಯ ಕಲ್ಯಾಣಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಚಿತ್ರತಂಡ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡಿದ್ದು ನವೆಂಬರ್ 11 ರಿಂದ 14ರವರೆಗೆ ಶೂಟಿಂಗ್ ಮಾಡಲು ಸರ್ಕಾರಕ್ಕೆ 96 ಸಾವಿರ ರೂ. ಬಿಲ್ ಪಾವತಿಸಲಾಗಿದೆ.
Advertisement
ಅನುಮತಿ ಪಡೆದುಕೊಂಡಿರುವ ಚಿತ್ರತಂಡಕ್ಕೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಚಿತ್ರೀಕರಣ ಮಾಡಿ ಎಂದೂ ಹೇಳಲಾಗಿದ್ದರೂ ಚಿತ್ರತಂಡ ಕಲ್ಯಾಣಿಯ ತುಂಬಾ ಕೇಸರಿ ಬಣ್ಣದ ಬಟ್ಟೆಗಳನ್ನ ಕಟ್ಟಿ ಕೇಸರಿಕರಣ ಮಾಡಿದೆ. ಜೊತೆಗೆ ಕಲ್ಯಾಣಿಯಲ್ಲೇ ವಿಶೇಷವಾದ ಸೆಟ್ ಹಾಕಿದ್ದು ಚೌಡೇಶ್ವರಿ ದೇವಿ ವಿಗ್ರಹವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದು ಶಕ್ತಿ ಕೇಂದ್ರವಾಗಿರುವ ಮೇಲುಕೋಟೆಯಲ್ಲಿ, ತಾತ್ಕಾಲಿಕವಾಗಿಯಾದರೂ ಬೇರೊಂದು ಶಕ್ತಿ ದೇವರನ್ನ ಪ್ರತಿಷ್ಠಾಪಿಸಿದರೆ ಮೂಲ ದೇವರ ಶಕ್ತಿ ಕುಂದುಂಟಾಗುತ್ತದೆ. ಅದು ತಕ್ಷಣ ಪರಿಣಾಮ ಬೀರದೇ ಇದ್ದರೂ ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ ಎಂದು ದೇವಾಲಯದ ಅರ್ಚಕ ಸಂಪತ್ ಕುಮಾರ್ ಹೇಳಿದ್ದಾರೆ.
Advertisement
ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷದ ಪ್ರತೀ ದಿನವೂ ಒಂದಲ್ಲಾ ಒಂದು ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ. ಹೀಗೆ ನಡೆಯುವ ಪೂಜೆಗಳಿಗೆ ಪವಿತ್ರ ಕಲ್ಯಾಣಿಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಲಾಗುತ್ತದೆ. ದೇವಾಲಯ ಮಾತ್ರವಲ್ಲದೆ ಕಲ್ಯಾಣಿಯಲ್ಲೂ ಹಲವು ದೇವರುಗಳಿದ್ದು ಎಲ್ಲಾ ದೇವರಿಗೂ ಪೂಜೆ ಅಭಿಷೇಕ ಮಾಡಬೇಕಾಗುತ್ತದೆ. ಹಾಗೆಯೇ ಕಳೆದ ಭಾನುವಾರ ಮೇಲುಕೋಟೆ ದೇವಾಲಯಕ್ಕೆ ಸಂಬಂಧ ಪಟ್ಟಂತಹ, ಮಹಾಮುನಿ ಜೀಯರ್ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅಭಿಷೇಕ ನಡೆಯಬೇಕಾಗಿತ್ತು. ಕಲ್ಯಾಣಿಯಿಂದ ನೀರನ್ನು ತಂದು ಅಭಿಷೇಕ ನೆರವೇರಿಸಬೇಕಿತ್ತು. ಆದರೆ ಕಲ್ಯಾಣಿಯ ಬಳಿ ಚಿತ್ರ ತಂಡ ಸೆಟ್ ಹಾಕಿದ್ದರಿಂದ, ಕಳೆದ 600 ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದ ಅಭಿಷೇಕಕ್ಕೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮೇಲುಕೋಟೆಯಲ್ಲಿ ವರ್ಷದ ಹಲವು ದಿನ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಡೆಯುತ್ತಿರುತ್ತದೆ. ಈ ವೇಳೆ ದೇವಾಲಯದ ಮೂಲ ಸ್ವರೂಪಕ್ಕೆ ಹಾನಿಯುಂಟಾಗುತ್ತದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಚಿತ್ರದ ಶೂಟಿಂಗ್ ಮಾಡುವುದಕ್ಕೆ ಅನುಮತಿ ನೀಡುವ ಅಧಿಕಾರಿಗಳು, ದೇವಾಲಯದ ಉತ್ಸವಗಳಿಗೆ, ಪೂಜಾ ಕೈಂಕರ್ಯಗಳಿಗೆ ಮತ್ತು ಸ್ಥಳ ಮಹಿಮೆಗೆ ತೊಂದರೆಯಾಗದಂತೆ ಚಿತ್ರೀಕರಣ ನಡೆಯುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಧಾರ್ಮಿಕ ಚಿಂತಕ ಆನಂದ್ ಆಳ್ವರ್ ಅಭಿಪ್ರಾಯಪಟ್ಟಿದ್ದಾರೆ.
ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತಿರುವ ಮೇಲುಕೋಟೆಯ ಶ್ರೀ ಚಲುವ ನಾರಾಯಣಸ್ವಾಮಿ ದೇವಾಲಯ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಿ ಇನ್ನು ಮುಂದೆ ಚಿತ್ರೀಕರಣದಿಂದ ದೇವಾಲಯದ ಆಚರಣೆಗಳಿಗೆ ಮತ್ತು ಭಕ್ತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews