ನವದೆಹಲಿ: ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಕ್ಯಾತೆ ವ್ಯಕ್ತಪಡಿಸಿದ್ದು, ಈ ಯೋಜನೆಗೆ ಒಪ್ಪಿಗೆ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ.
ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾದ ಪಳನಿಸ್ವಾಮಿ, ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡು ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.
Advertisement
ಈ ಹಿಂದೆ ಈ ಯೊಜನೆ ಸಂಬಂಧ ಪಳನಿಸ್ವಾಮಿ ಮೋದಿಗೆ ಪತ್ರ ಬರೆದಿದ್ದರು. ಆದರೆ ಇಂದು ಖುದ್ದು ಭೇಟಿಯಾಗಿ ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನು ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?
Advertisement
Advertisement
ಮೂರು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆ ಸಂಬಂಧ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
Advertisement
ಕುಮಾರಸ್ವಾಮಿ ಮತ್ತು ರಾಜ್ಯದ ಅಧಿಕಾರಿಗಳು ಮೇಕೆದಾಟು ಯೋಜನೆಯ ಬಗ್ಗೆ ವಿವರಿಸುವ ಮೊದಲೇ ಎಲ್ಲ ಮಾಹಿತಿಯನ್ನು ತಿಳಿದುಕೊಂಡಿದ್ದ ಗಡ್ಕರಿ ಈ ಯೋಜನೆ ಆರಂಭಿಸಿದರೆ ತಪ್ಪೇನಿದೆ? ಕರ್ನಾಟಕ ಭೂಮಿ ಮುಳುಗಡೆಯಾಗುತ್ತದೆ ಹೊರತು ತಮಿಳುನಾಡು ಭೂಮಿ ಮುಳುಗಡೆಯಾಗುವುದಿಲ್ಲ. ನೂರಾರು ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹೋಗುವುದು ತಪ್ಪುತ್ತದೆ ಅಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು ಎಂದು ಮೂಲಗಳು ತಿಳಿಸಿತ್ತು. ಇದನ್ನು ಓದಿ: ಮೇಕೆದಾಟು ಯೋಜನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ ಎಚ್‍ಡಿಕೆ
ಗಡ್ಕರಿ ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ್ದ ಸಿಎಂ, ಮೇಕೆದಾಟು ಯೋಜನೆಗೆ ಜಲಸಂಪನ್ಮೂಲ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈ ಬಾರಿ 200 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡರೆ, ಬರಗಾಲದ ಸಂದರ್ಭದಲ್ಲಿ ಬಳಕೆಗೆ ಅನುಕೂಲವಾಗಿರುತ್ತದೆ. ವಾಸ್ತವಾಂಶಗಳ ಕುರಿತು ಸಚಿವರ ಗಮನಕ್ಕೆ ತಂದಿದ್ದು, ಅವರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv