ಜನರೊಟ್ಟಿಗೆ ಪಾದಯಾತ್ರೆಗೆ ಅವಕಾಶ ನೀಡದಿದ್ರೆ ನಾನು, ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ: ಡಿಕೆಶಿ

Public TV
3 Min Read
DKSHIVAKUMAR SIDDARAMAIAH 1

ಬೆಂಗಳೂರು: ನಾವು ಕಾನೂನು ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನೀರಿಗಾಗಿ ನಡಿಗೆ ಮಾಡುತ್ತೇವೆ. ಒಂದು ವೇಳೆ ಸಾರ್ವಜನಿಕರು ನಡಿಗೆಯಲ್ಲಿ ಭಾಗವಹಿಸಲು ಸರ್ಕಾರ ಅವಕಾಶ ಮಾಡಿಕೊಡದಿದ್ದರೆ, ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೃಢ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನೀರಿಗಾಗಿ ನಡಿಗೆ ಮಾಡುತ್ತೇವೆ. ಒಂದು ವೇಳೆ ಸಾರ್ವಜನಿಕರು ನಡಿಗೆಯಲ್ಲಿ ಭಾಗವಹಿಸಲು ಸರ್ಕಾರ ಅವಕಾಶ ಮಾಡಿಕೊಡದಿದ್ದರೆ, ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ. ರಾಜ್ಯ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ನೀರಿಗಾಗಿ ನಡೆಯಬೇಕು ಎಂದು ಜ. 9ರಿಂದ 19 ರವರೆಗೂ ನಡೆಯಲಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಟಫ್‌ ರೂಲ್ಸ್‌ ಜಾರಿಯಾದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ: ಸಿದ್ದರಾಮಯ್ಯ

mekedatu 1 1

ಪಕ್ಷಬೇಧ ಮರೆತು, ಎಲ್ಲ ಪಕ್ಷದ ನಾಯಕರು, ಸಂಘಟನೆಗಳಿಗೆ ಆಹ್ವಾನ ನೀಡಿದ್ದು, ಜನರು ಕೂಡ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಹಾಗೂ ಕೆಲವು ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನೀರಿಗಾಗಿ ನಡಿಗೆಗೆ ಜನ ತೋರುತ್ತಿರುವ ಉತ್ಸಾಹ ನೋಡಿ ಇದನ್ನು ತಡೆಯಲು ದೊಡ್ಡ ಪಿತೂರಿ ರೂಪಿಸಿ, ಕೋವಿಡ್ ನೆಪದಲ್ಲಿ ನಿರ್ಬಂಧ ಹಾಕಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದ ಆರೂವರೆ ಕೋಟಿ ಜನರಲ್ಲಿ 3 ಸಾವಿರ ಪ್ರಕರಣ ದಾಖಲಾಗಿದೆ ಎಂದು ಯಾವುದೇ ಕಾರ್ಯಕ್ರಮ, ಪ್ರತಿಭಟನೆ ನಡೆಯಬಾರದು ಎಂದು ನಿರ್ಬಂಧ ಹಾಕಿದ್ದಾರೆ. ಅವರು ಜ. 19 ರಂದು ಬೆಳಗ್ಗೆ 5 ರವರೆಗೂ ಕರ್ಫ್ಯೂ ಹಾಕಿದ್ದಾರೆ. ಆ ಮೂಲಕ 19 ರ ಸಾರ್ವಜನಿಕ ಸಭೆಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲಿಯವರೆಗೂ ವೀಕೆಂಡ್ ಕರ್ಫ್ಯೂ ಹಾಗೂ ನಿರ್ಬಂಧ ಹಾಕಿದ್ದಾರೆ. ಪಕ್ಷದಲ್ಲಿ ನಾವೆಲ್ಲ ಚರ್ಚಿಸಿದ್ದು, ಈ ನಡಿಗೆ ರಾಜ್ಯದ ಹಿತಕ್ಕಾಗಿಯೇ ಹೊರತು ರಾಜಕಾರಣಕ್ಕೆ ಅಲ್ಲ. ರಾಜ್ಯದ ಹಿತಕ್ಕಾಗಿ ನೀರಿಗಾಗಿ ನಡಿಗೆ ಕಾರ್ಯಕ್ರಮವನ್ನು ಕಾನೂನು ಹಾಗೂ ಕೋವಿಡ್ ನಿಯಮದಂತೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿ ನಂತರ ನಮ್ಮ ಪಾದಯಾತ್ರೆ ಬಗ್ಗೆ ಯೋಚಿಸುತ್ತೇವೆ: ಡಿ.ಕೆ.ಸುರೇಶ್

siddaramaiah

ಜನವರಿ 9 ರಂದು ಬೆಳಗ್ಗೆ ಈ ಕಾರ್ಯಕ್ರಮ ಆರಂಭಿಸಿ, 19 ರಂದು ಬಹಿರಂಗ ಸಭೆ ಮೂಲಕ ಮುಕ್ತಾಯ ಮಾಡುತ್ತೇವೆ. ಹರಿಯೋ ನೀರು, ಬೀಸೋ ಗಾಳಿ, ಉದಯಿಸುವ ಸೂರ್ಯನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ ಎಂದು ಬಿಜೆಪಿ ನಾಯಕರು ಗಮನದಲ್ಲಿಟ್ಟುಕೊಳ್ಳಲಿ. ಹೀಗಾಗಿ ನಾವು ಘೋಷಿಸಿರುವಂತೆ ನೀರಿಗಾಗಿ ನಡಿಗೆಗೆ ನಮ್ಮ ಮಾತಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಈ ನಿರ್ಬಂಧಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ಸ್ಥಿತಿ ನೋಡಿದರೆ ನಮ್ಮ ಹೊಟ್ಟೆ ಉರಿಯುತ್ತಿದೆ. ಕ್ಯಾಬ್ ಚಾಲಕರು, ಬೀದಿಬದಿ ವ್ಯಾಪಾರಿಗಳು, ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಬದುಕಿಸುವ ಕೆಲಸ ಮಾಡಲಿ. ಇವರ ರಾಜಕೀಯಕ್ಕೆ ಸೋಂಕಿನ ಸಂಖ್ಯೆ ಹೆಚ್ಚಿಸಿ ನಿರ್ಬಂಧ ಹಾಕಿದ್ದಾರೆ. ರಾಜಕೀಯ ಬಿಟ್ಟು ಜನರಿಗೆ ನೆರವಾಗಲಿ ಎಂದಿದ್ದಾರೆ.

d.k.shivakumar

ನಾವು 100 ನಾಟೌಟ್ ಮಾಡಿದಾಗ ಕೇಸ್ ಹಾಕಿದ್ದಾರೆ. 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಎಂಬ ನಿರ್ಬಂಧ ಇರುವಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಬಿಜೆಪಿ ನಾಯಕರು ಸಾವಿರಾರು ಜನ ಸೇರಿದ್ದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ ನಿಯಮ ಉಲ್ಲಂಘಿಸಿದ್ದರು. ಕೇಂದ್ರ ಸಚಿವರು ಜನಾರ್ಶೀವಾದ ಯಾತ್ರೆ ಮಾಡಿದಾಗ ನಿಯಮ ಉಲ್ಲಂಘನೆಯಾಗಲಿಲ್ಲವೇ? ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ? ನಾವು ತಪ್ಪು ಮಾಡಲು ಹೊರಟಿಲ್ಲ. ಆ ತಪ್ಪಿನ ಬಗ್ಗೆ ನೀವು ಅವರನ್ನು ಪ್ರಶ್ನಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೂ ಮೇಕೆದಾಟು ಡಿಪಿಆರ್‌ಗೂ ಸಂಬಂಧವಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕುಮಾರಣ್ಣ ಅವರು ವಿದ್ಯಾವಂತ, ಬುದ್ಧಿವಂತ, ಮೇಧಾವಿಗಳಿದ್ದಾರೆ. ಈಗ ಅವರ ಬಗ್ಗೆ ಮಾತಾಡುವುದಿಲ್ಲ. ಮಾತಾಡಲು ಬೇಕಾದಷ್ಟು ಸಮಯ ಇದೆ. ಅವರ ಸಂಪುಟದಲ್ಲಿ ನಾನು ನೀರಾವರಿ ಸಚಿವನಾಗಿ ಎಷ್ಟು ಬಾರಿ ಕೇಂದ್ರ ಸಚಿವರ ಭೇಟಿ ಮಾಡಿದ್ದೇನೆ. ಜೊತೆಗೆ ತಮಿಳುನಾಡು ಸಿಎಂ ಭೇಟಿ ಮಾಡಲು ಎಷ್ಟು ಪತ್ರ ಬರೆದು ಪ್ರಯತ್ನಿಸಿದ್ದೇನೆ. ಕೇಂದ್ರ ಸಚಿವರು ಉಭಯ ರಾಜ್ಯಗಳ ಸಚಿವರ ಸಭೆ ನಡೆಸಲು ಪ್ರಯತ್ನಿಸಿದ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಅವರು ಮೈಲೇಜ್ ತೆಗೆದುಕೊಂಡು ಖುಷಿಪಡಲು ಮಾತನಾಡುತ್ತಿದ್ದಾರೆ, ಮಾತನಾಡಲಿ’ ಎಂದು ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *