ಬೆಂಗಳೂರು: ಮೇಕೆದಾಟು ವಿರುದ್ಧದ ತಮಿಳುನಾಡು ವಿಧಾನಸಭೆ ಕೈಗೊಂಡ ನಿರ್ಣಯಕ್ಕೆ ಕೌಂಟರ್ ಕೊಡಲು ಸರ್ಕಾರ ನಿರ್ಧರಿಸಿದೆ. ಬುಧವಾರ ರಾಜ್ಯ ವಿಧಾನಸಭೆಯಲ್ಲಿ ತಮಿಳುನಾಡು ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.
ಮಂಗಳವಾರ ವಿಧಾನಸಭೆ ಕಲಾಪದಲ್ಲಿ ತಮಿಳುನಾಡಿನ ಕ್ಯಾತೆ ರಾಜಕಾರಣಕ್ಕೆ ಪಕ್ಷಾತೀತವಾಗಿ ಸದಸ್ಯರೆಲ್ಲ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ಖಂಡಿಸಿ ಬುಧವಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗುವುದು. ತಮಿಳುನಾಡು ನಿರ್ಣಯ ಕಾನೂನು ಬಾಹಿರ. ನಮ್ಮ ಈ ನಿಲುವು ಸ್ಪಷ್ಟವಾಗಿದೆ. ಬುಧವಾರ ನಿರ್ಣಯ ತರುತ್ತೇವೆ, ವಿಳಂಬ ಮಾಡುವುದು ಸರಿಯಲ್ಲ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಕೆಐಎಡಿಬಿ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಬೇಡ ಎಂದವರಿಗೆ ಅಭಿವೃದ್ಧಿಪಡಿಸಿದ ಭೂಮಿ: ನಿರಾಣಿ
ಕಾನೂನು ಸಲಹೆಗಾರರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಅವರ ಸಲಹೆ ಪಡೆದು ಬುಧವಾರ ಸ್ಪಷ್ಟವಾದ ನಿಲುವು ಸದನದ ಮುಂದೆ ಹೇಳುತ್ತೇವೆ. ತಮಿಳುನಾಡಿನ ನಿರ್ಣಯ ನಮ್ಮ ಹಕ್ಕಿನ ಮೇಲೆ ಗದಾ ಪ್ರಹಾರ ಹಾಗೂ ಒಕ್ಕೂಟ ವ್ಯವಸ್ಥೆಯ ವಿರುದ್ಧ. ಇದನ್ನು ಪ್ರಬಲವಾಗಿ ತೆಗೆದುಕೊಂಡು ಹೋಗುತ್ತೇವೆ. ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ. ನಮ್ಮ ಡಿಪಿಆರ್ ಪರಿಸರ ಇಲಾಖೆಯ ಅನುಮತಿ ಸಿಗಬೇಕು. ಅದರಲ್ಲಿ ಎರಡು ಮಾತಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದರು.
ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್‌ಡಿ ಕುಮಾರಸ್ವಾಮಿ ಹಾಗೂ ಶಾಸಕ ಹೆಚ್‌ಕೆ ಪಾಟೀಲ್ ತಮಿಳುನಾಡು ನಿರ್ಣಯಕ್ಕೆ ಕಿಡಿಕಾರಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತಾಡಿ, ಸದನದಲ್ಲಿ ಎಲ್ಲಾ ಪಕ್ಷದ ಸಮ್ಮತಿಯೊಂದಿಗೆ ಈ ಸದನ ತೀರ್ಮಾನ ಮಾಡಬೇಕು. ತಮಿಳುನಾಡು ಸರ್ಕಾರದ ನಿರ್ಣಯ ಖಂಡಿಸಿ ನಾವು ನಿರ್ಣಯ ಮಂಡನೆ ಮಾಡಬೇಕು ಹಾಗೂ ನಿರ್ಣಯದ ಮೂಲಕ ಕೇಂದ್ರಕ್ಕೆ ಒತ್ತಡ ಹಾಕಬೇಕು. ಸರ್ವ ಪಕ್ಷಗಳ ನಿಯೋಗ ದೆಹಲಿಗೆ ಕರೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲ ಶಕ್ತಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸೆಂಚುರಿ ಕ್ಲಬ್‍ನ್ನು ಪಾರ್ಕ್ ಜೋನ್‍ನಿಂದ ಹೊರಗಿಡಲು ಸಾಧ್ಯವಿಲ್ಲ: ಮುನಿರತ್ನ
ಇತ್ತ ತಮಿಳುನಾಡು ನಿರ್ಣಯಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡು ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ಕೇಂದ್ರಕ್ಕೆ ಮೇಕೆದಾಟು ಯೋಜನೆ ಬಗ್ಗೆ ಮನವರಿಕೆ ಮಾಡಬೇಕಿದೆ. ನಮಗೆ ಹೆಚ್ಚುವರಿ ನೀರು ಸಿಕ್ಕಿದೆ ಎಂದು ಟೆಕ್ನಿಕಲಿ ಹೇಳಲು ಬರುವುದಿಲ್ಲ. ಕೇಂದ್ರವನ್ನು ಮನವೊಲಿಸಿ ಮೇಕೆದಾಟು ಯೋಜನೆ ಜಾರಿ ಮಾಡಿ. ಈ ನಿಟ್ಟಿನಲ್ಲಿ ತಾವು ಕೂಡಲೇ ಪ್ರಧಾನಿ, ಜಲಸಂಪನ್ಮೂಲ ಸಚಿವರ ಮನವೊಲಿಕೆ ಮಾಡಿ ಎಂದು ಒತ್ತಾಯಿಸಿದರು. ಅಲ್ಲದೆ ಮೇಕೆದಾಟು ವಿಚಾರದಲ್ಲಿ ರಾಜ್ಯದಲ್ಲಿ ಒಗ್ಗಟ್ಟಿನ ಖಂಡನೆ ವ್ಯಕ್ತವಾಗಿದೆಯೇನೋ ಸರಿ. ಆದರೆ ಅಷ್ಟಕ್ಕೇ ಸರ್ಕಾರ ಸುಮ್ಮನಾಗದೇ ಕೇಂದ್ರದ ಮೇಲೆ ಒತ್ತಡ ಹಾಕಿ ಶೀಘ್ರ ಯೋಜನೆ ಜಾರಿ ಮಾಡುವಂತಾಗಲಿ ಎಂದರು.