ನವದೆಹಲಿ: ನೆರೆಯ ರಾಷ್ಟ್ರಗಳ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದಿತ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಮೆಹಬೂಬಾ ಮುಫ್ತಿ ಪುತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಭಾರತ-ಮುಸ್ಲಿಮರಿಗಾಗಿ ಇರುವ ದೇಶವಲ್ಲ ಎಂದು ಬರೆದಿದ್ದಾರೆ.
Advertisement
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ ಈ ಕುರಿತು ಟ್ವೀಟ್ ಮಾಡಲಾಗಿದ್ದು, ಸರ್ಕಾರ ಮುಸ್ಲಿಮರನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
India – No country for Muslims https://t.co/j8NK5XQxnu
— Mehbooba Mufti (@MehboobaMufti) December 4, 2019
Advertisement
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಆಗಸ್ಟ್ 5ರಂದು ಮೆಹಬೂಬಾ ಮುಫ್ತಿಯವರನ್ನು ಬಂಧನಕ್ಕೊಳಪಡಿಸಿದಾಗಿನಿಂದ ಸನಾ ಇಲ್ತಿಜಾ ಜವೇದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಹ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸನಾ, ಮುಸ್ಲಿಮರು ಹೆಚ್ಚಿರುವ ದೇಶದಲ್ಲಿ ಅವರು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಬಂಧಿಸಲಾಗಿದ್ದ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹಾಗೂ ಮಗ ಒಮರ್ ಅಬ್ದುಲ್ಲಾ ಅವರನ್ನು ಇನ್ನೂ ಸಹ ಬಿಡುಗಡೆ ಮಾಡಿಲ್ಲ. ಅಲ್ಲದೆ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಸಹ ಸ್ಪಷ್ಟತೆ ಇಲ್ಲ.
ಇಂದು ಸಚಿವ ಸಂಪುಟ ಸಭೆಯಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ಥಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.
ಈ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯ ಕಿರುಕುಳ ಅನುಭವಿಸುತ್ತಿದೆ. ಹೀಗಾಗಿ ಇವರಿಗೆ ಭಾರತದ ಪೌರತ್ವ ನೀಡುವ ಅವಶ್ಯಕತೆ ಇದೆ ಎನ್ನುವುದು ಕೇಂದ್ರದ ವಾದ. ಆದರೆ ಮುಸ್ಲಿಮರನ್ನು ಹೊರಗಡೆ ಇಟ್ಟಿರುವುದು ಸಂವಿಧಾನ ವಿರೋಧಿ ನಡೆ ಎನ್ನುವುದು ವಿಪಕ್ಷಗಳ ಪ್ರತಿವಾದ.
ಭಾರತದ ಪೌರತ್ವ ಪಡೆಯಬೇಕಾದರೆ 12 ವರ್ಷಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ನೆಲೆಸಿರಬೇಕು ಎನ್ನುವ ನಿಯಮವನ್ನು 6 ವರ್ಷಕ್ಕೆ ಈ ಮಸೂದೆ ಇಳಿಸಿದೆ. ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲದಿದ್ದರೂ ಕೂಡ ಪೌರತ್ವ ಸಿಗಲಿದೆ.
2016ರಲ್ಲಿ ಈ ಮಸೂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಈ ವೇಳೆ ಕೋಲಾಹಲ ನಡೆದು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ಹೋಗಿತ್ತು. ಈ ಸಮಿತಿ ಈ ವರ್ಷದ ಜನವರಿಯಲ್ಲಿ ವರದಿ ನೀಡಿದ ಬಳಿಕ ಮಸೂದೆ ಮಂಡನೆಯಾಗಿತ್ತು. ಲೋಕಸಭೆಯಲ್ಲಿ ಪಾಸ್ ಆದರೂ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಸೂದೆ ಪಾಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ 16ನೇ ಲೋಕಸಭೆಯ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಈಗ ತಿದ್ದುಪಡಿ ಮಾಡಿ ಮಂದಿನ ಮಂಗಳವಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ. ಹೀಗಾಗಿ ಎಲ್ಲ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.