ಅಫ್ಘಾನ್‍ನಿಂದ ಪಾಠ ಕಲಿತುಕೊಳ್ಳಿ, ನಮ್ಮನ್ನು ಪರೀಕ್ಷಿಸಬೇಡಿ- ಕೇಂದ್ರಕ್ಕೆ ಮುಫ್ತಿ ಎಚ್ಚರಿಕೆ

Public TV
2 Min Read
PDP mehbooba

ಶ್ರೀನಗರ: ತಾಲಿಬಾನ್ ಅಧಿಕಾರ ವಶಪಡಿಸಿಕೊಂಡು, ಅಮೆರಿಕವನ್ನು ಅಫ್ಘಾನಿಸ್ತಾನದಿಂದ ಪಲಾಯನ ಮಾಡುವಂತೆ ಮಾಡಿದೆ. ಕೇಂದ್ರ ಸರ್ಕಾರ ಅಫ್ಘಾನಿಸ್ತಾನದಿಂದ ಪಾಠ ಕಲಿಯಲಿ. ಅಲ್ಲದೆ 2019ರಲ್ಲಿ ರದ್ದು ಮಾಡಿರುವ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸಲಿ ಎಂದು ಹೇಳಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಮ್‍ನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡಿರುವುದನ್ನು ಉಲ್ಲೇಖಿಸಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ನಮ್ಮನ್ನು ಪರೀಕ್ಷಿಸಬೇಡಿ. ಸರ್ಕಾರ ಮಾರ್ಗಗಳನ್ನು ಸರಿಪಡಿಸಿಕೊಂಡು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಪಕ್ಕದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

ಸೂಪರ್ ಪವರ್ ಆಗಿರುವ ಅಮೆರಿಕ ಗಂಟು ಮೂಟೆ ಕಟ್ಟಿಕೊಂಡು ಪಲಾಯನ ಮಾಡಿದೆ. ಮಾಜಿ ಪ್ರಧಾನಿ ವಾಜಪೇಯಿಯವರ ರೀತಿ ಜಮ್ಮು ಕಾಶ್ಮೀರದೊಂದಿಗೆ ಮಾತುಕತೆ ನಡೆಸಲು ನಿಮಗೆ ಇನ್ನೂ ಸಮಯವಿದೆ. ಜಮ್ಮು ಕಾಶ್ಮೀರವನ್ನು ಕಾನೂನುಬಾಹಿರವಾಗಿ ಮತ್ತು ಅಸಂವಿಧಾನಿಕವಾಗಿ ಕಿತ್ತುಕೊಳ್ಳುವುದು. ಜಮ್ಮು ಕಾಶ್ಮೀರವನ್ನು ವಿಭಜನೆ ಮಾಡಿರುವ ನಿಮ್ಮ ತಪ್ಪನ್ನು ತಕ್ಷಣ ಸರಿಪಡಿಸಿ, ತಡವಾದರೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

ಕೇಂದ್ರ ಸರ್ಕಾರ ನಮ್ಮಿಂದ ಕಸಿದುಕೊಂಡಿರುವುದನ್ನು ಹಿಂದಿರುಗಿಸಬೇಕು. ಕಾಶ್ಮೀರ ಸಮಸ್ಯೆಯನ್ನು ಜಮ್ಮು ಕಾಶ್ಮೀರದ ಜನರ ಆಶಯಗಳು ಹಾಗೂ ಆಕಾಂಕ್ಷೆಗಳ ಪ್ರಕಾರ ಪರಿಹರಿಸಬೇಕು ಎಂದು ಹೇಳಿದ್ದಾರೆ.

ಗನ್ ಹಾಗೂ ಕಲ್ಲುಗಳನ್ನು ಹಿಡಿಯುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ತಾಲಿಬಾನಿಗಳು ಇದೀಗ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಈ ಮೂಲಕ ಅಮೆರಿಕ ಪಲಾಯನ ಮಾಡುವಂತೆ ಮಾಡಿದ್ದಾರೆ. ಇಡೀ ವಿಶ್ವ ಅವರತ್ತ ನೋಡುತ್ತಿದೆ. ಅವರು ಹೇಗೆ ವರ್ತಿಸುತ್ತಿದ್ದಾರೆ? ಹೇಗೆ ಕಟ್ಟುನಿಟ್ಟು ಪಾಲಿಸುತ್ತಾರೆ, ಜನರೊಂದಿಗೆ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಯುವಕರು ಶಸ್ತ್ರಾಸ್ತ್ರಗಳನ್ನು ಹಿಡಿಯಬಾರದು. ಗನ್ ಹಾಗೂ ಕಲ್ಲುಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಫ್ಘಾನಿಸ್ತಾದ ಪರಿಸ್ಥಿತಿ ಜಮ್ಮು ಕಾಶ್ಮೀರದ ಜನರಿಗೆ ಪಾಠವಾಗಬೇಕು. ಯುವಕರು ಜೀವಗಳನ್ನು ಕಾಪಾಡಿಕೊಳ್ಳಬೇಕು. ನೀವು ಜೀವಗಳನ್ನು ಕಳೆದುಕೊಂಡರೆ ಎಲ್ಲವೂ ಮುಗಿದಂತೆ ಎಂದು ಎಚ್ಚರಿಸಿದ್ದಾರೆ.

ಮೆಹಬೂಬಾ ಮುಫ್ತಿ ಅವರ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡ ಬಳಿಕ ಹತಾಶೆಯಿಂದ ದ್ವೇಷದ ರಾಜಕಾರಣದಲ್ಲಿ ತೊಡಗಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಪಿತೂರಿ ಮಾಡುವವರು ನಾಶವಾಗುತ್ತಾರೆ ಎಂದು ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *