ನವದೆಹಲಿ: ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಡಿಯಾ ಸೋಲಲು ಭಾರತದ ಆಟಗಾರರು ಧರಿಸಿದ್ದ ಕಿತ್ತಳೆ ಬಣ್ಣದ ಜರ್ಸಿ ಕಾರಣ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ವಿಶ್ವಕಪ್‍ನಲ್ಲಿ ಸೋಲನ್ನೇ ಕಾಣದ ಭಾರತ ಇಂಗ್ಲೆಂಡ್ ವಿರುದ್ಧ ಬರ್ಮಿಗ್ಹ್ಯಾಮ್‍ನಲ್ಲಿ ನಡೆದ ಪಂದ್ಯದಲ್ಲಿ 31 ರನ್‍ಗಳ ಅಂತರದಿಂದ ಸೋತಿದೆ. ಇದಕ್ಕೆ ಬೇಸರ ವ್ಯಕ್ತಪಡಿಸುವ ರೂಪದಲ್ಲಿ ಮೆಹಬೂಬಾ ಮುಫ್ತಿ ಭಾರತ ಸೋಲಿಗೆ ಕಿತ್ತಳೆ ಬಣ್ಣದ ಜರ್ಸಿ ಕಾರಣ ಎಂದು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.
Advertisement
Call me superstitious but I’d say it’s the jersey that ended India’s winning streak in the #ICCWorldCup2019.
— Mehbooba Mufti (@MehboobaMufti) June 30, 2019
Advertisement
ಭಾರತದ ಸೋಲಿನ ನಂತರ ಟ್ವೀಟ್‍ವೊಂದನ್ನು ಮಾಡಿರುವ ಮೆಹಬೂಬಾ ಮುಫ್ತಿ, “ನಾನು ಮೂಢ ನಂಬಿಕೆಗಳನ್ನು ನಂಬುತ್ತೇನೆಂದು ಕರೆದರೂ ಪರವಾಗಿಲ್ಲ ಭಾರತದ ಗೆಲುವಿನ ಓಟವನ್ನು ತಡೆದದ್ದೆ ಟೀಂ ಇಂಡಿಯಾ ಧರಿಸಿದ್ದ ಕೇಸರಿ ಸರ್ಜಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಈಗ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Advertisement
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ರವೀಂದರ್ ರೈನಾ ಭಾರತ ಸೋತು ಪಾಕಿಸ್ತಾನವನ್ನು ಮನೆಗೆ ಕಳುಹಿಸಿದ್ದಕ್ಕೆ ಮೆಹಬೂಬಾ ಮುಫ್ತಿ ಅವರ ಮನಸ್ಸಿಗೆ ತುಂಬಾ ನೋವಾಗಿದೆ ಆದಕ್ಕೆ ಅವರು ಈ ರೀತಿ ಭಾರತದ ಜರ್ಸಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಕೂಡ ಪ್ರತಿಕ್ರಿಯಿಸಿದ್ದು, “ಹಾಗಾದರೆ ಪಾಕಿಸ್ತಾನ ಹಸಿರು ಬಣ್ಣದ ಜರ್ಸಿ ಧರಿಸಿ ಆಡುತ್ತದೆ ಮತ್ತೆ ಪಾಕಿಸ್ತಾನ ಏಕೆ ಸೋಲುತ್ತದೆ. ಪಾಕಿಸ್ತಾನದ ಆಟಗಾರರು ಪಾದ್ರಿಗಳಂತೆ ಗಡ್ಡ ಬಿಡುತ್ತಾರೆ ಅದಕ್ಕಾಗಿಯೇ ಸೋಲುತ್ತಿರಬಹುದು” ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಇದಕ್ಕೂ ಮುಂಚೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕೇಸರಿ ಬಣ್ಣದ ಜರ್ಸಿಗೆ ಆಕ್ಷೇಪ ಎತ್ತಿದ್ದವು. ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಐಸಿಸಿ 2019 ಏಕದಿನ ವಿಶ್ವಕಪ್‍ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ವಿರುದ್ಧ 31 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿದೆ. ಈ ಮೂಲಕ 1992ರ ಬಳಿಕ ಭಾರತ ವಿರುದ್ಧ ವಿಶ್ವಕಪ್‍ನಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ.
ಹೊಸ ಜರ್ಸಿ ಯಾಕೆ?
ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ. ಫುಟ್ಬಾಲ್‍ನಲ್ಲಿರುವ `ಹೋಮ್’ ಮತ್ತು `ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.
ಈ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಟೀಂ ಇಂಡಿಯಾ ಅಭಿಮಾನಿಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಭಾರತದ ಫುಟ್‍ಬಾಲ್ ಮತ್ತು ಹಾಕಿ ಆಟಗಾರರು ಕೇಸರಿ ಬಣ್ಣದ ಜರ್ಸಿಯಲ್ಲಿ ಆಡಿದ್ದಾರೆ. ಈ ವೇಳೆ ಆಕ್ಷೇಪ ಎತ್ತದ ರಾಜಕೀಯ ನಾಯಕರು ಈಗ ಪ್ರಚಾರಕ್ಕಾಗಿ ವಿವಾದವನ್ನು ಎತ್ತುತ್ತಿದ್ದಾರೆ ಎಂದು ಟೀಕಿಸಿದ್ದಾರೆ.