Connect with us

Bengaluru City

ಭಾನುವಾರ ನಡೆಯಲಿದೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಜೋಡಿ ಸಪ್ತಪದಿ ತುಳಿಯಲು ಸಿದ್ಧವಾಗಿದ್ದು, ಇಷ್ಟುದಿನಗಳ ಕಾಲ ಅಂತೆ ಕಂತೆಗಳ ಸುದ್ದಿಯಾಗಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಜೋಡಿಯ ನಿಶ್ಚಿತಾರ್ಥ ಸಮಾರಂಭಕ್ಕೆ ಸಿದ್ಧತೆ ಆರಂಭವಾಗಿದೆ. ಈ ನಿಶ್ಚಿತಾರ್ಥದ ವಿಶೇಷ ಮಾಹಿತಿ ಇಂತಿದೆ.

ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಜೋಡಿಯ ಮದುವೆ ನಿಶ್ಚಿತಾರ್ಥ ನಾಳೆ ಸಮಾರಂಭ ನಡೆಯಲಿದ್ದು, ಇಷ್ಟು ದಿನ ಜನಗಳಲ್ಲಿದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಮೂಲಗಳ ಪ್ರಕಾರ ಜೆಪಿ ನಗರದಲ್ಲಿರುವ ಮೇಘನಾ ಅವರ ಮನೆಯಲ್ಲಿ ಬೆಳಗ್ಗೆ ನಿಶ್ಚಿತಾರ್ಥ ಶಾಸ್ತ್ರಗಳು ನಡೆಯುತ್ತವೆ. ಸಂಜೆ ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಹತ್ತಿರದ ಬಂಧುಗಳಿಗೆ ಹಾಗೂ ಆಪ್ತರಿಗೆ ಔತಣಕೂಟವನ್ನು ಏರ್ಪಡಿಸಲಾಗಿದೆ. ಎರಡೂ ಕುಟುಂಬಗಳಿಗೆ ಸಿನಿಮಾ ರಂಗದ ನಂಟು ಇರುವುದರಿಂದ ಚಿತ್ರರಂಗದ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವ ಸಾಧ್ಯತೆಗಳಿವೆ.

ಹಿರಿಯ ತಾರೆಗಳಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮಗಳು ಮೇಘನಾ ಪುಂಡ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟವರು. ನಂತರ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ರಾಜಾಹುಲಿ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಕಮ್‍ಬ್ಯಾಕ್ ಆಗಿದ್ದ ಮೇಘನಾ ರಾಜ್ ಬಹುಪರಾಕ್, ಲಕ್ಷ್ಮಣ, ಅಲ್ಲಮ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. `ಆಟಗಾರ’ ಚಿತ್ರದಲ್ಲಿ ಮೇಘನಾ ಮತ್ತು ಚಿರಂಜೀವಿ ಸರ್ಜಾ ಒಟ್ಟಾಗಿ ಅಭಿನಯಿಸಿದ್ದರು.

ನಟ ಅರ್ಜುನ್ ಸರ್ಜಾರವರ ಸಹೋದರಿ ಮಗ ಚಿರಂಜೀವಿ ಸರ್ಜಾ `ವಾಯುಪುತ್ರ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟವರು. ನಂತರ ಗಂಡೆದೆ, ಚಿರು, ದಂಡಂ ದಶಗುಣಂ, ವರದನಾಯಕ, ರುದ್ರತಾಂಡವ ಹೀಗೆ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಲವು ವರ್ಷಗಳಿಂದ ಚಿರು ಮತ್ತು ಮೇಘನಾ ರಾಜ್ ನಡುವೆ ಪ್ರೀತಿ ವಿಚಾರ ಚರ್ಚೆಯಾಗುತ್ತಲೇ ಇತ್ತು. ಆದರೆ ಈ ಕುರಿತು ಎಷ್ಟೇ ಕೇಳಿದರು ಇಬ್ಬರು ಮದುವೆ ವಿಚಾರ ಸುಳ್ಳು ಅನ್ನುತ್ತಿದ್ದರು. ಆದ್ರೀಗ ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳುವುದ ಮೂಲಕ ಎಲ್ಲ ಪ್ರಶ್ನೆಗಳಿಗೂ ತೆರೆಬಿದ್ದಿದೆ.

ತಾರಾಜೋಡಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಮಾಹಿತಿಯನ್ನು ಎಂದು ಸಾರ್ವಜನಿಕವಾಗಿ ತಿಳಿಸಿರಲಿಲ್ಲ.

Click to comment

Leave a Reply

Your email address will not be published. Required fields are marked *