ಕಿಚ್ಚ ಸುದೀಪ್ ಅವರು ತೆಲುಗಿನ ಸೈರಾ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿಯೊಂದು ತಿಂಗಳ ಹಿಂದೆಯೇ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ತಿಳಿದು ಸಂತಸಗೊಂಡಿದ್ದ ಅಭಿಮಾನಿಗಳಲ್ಲಿ ಸುದೀಪ್ ನಟಿಸಲಿರೋ ಪಾತ್ರ ಯಾವುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಹೋಗಿತ್ತು. ಆದರೀಗ ಸೈರಾ ಚಿತ್ರದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದ ತೆಲುಗಿನ ರಾಜನಾಗಿ ಕಿಚ್ಚ ನಟಿಸಲಿದ್ದಾರೆಂಬ ಸುದ್ದಿ ಸ್ಪಷ್ಟವಾಗುವ ಮೂಲಕ ಎಲ್ಲವೂ ಜಾಹೀರಾಗಿದೆ!
ಸದ್ಯ ತೆಲುಗು ಮಾತ್ರವಲ್ಲದೇ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಬೆರಗಾಗಿ ನೋಡುವಂತೆ ಮಾಡಿರುವ ಚಿತ್ರ ಸೈರಾ. ಸ್ವಾತಂತ್ರ್ಯ ಹೋರಾಟದ ವೀರೋದ್ಧಾತ ಕಥೆ ಹೊಂದಿರೋ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಅವುಕು ಎಂಬೊಂದು ಪ್ರಾಂತ್ಯದ ರಾಜನಾಗಿ ನಟಿಸಲಿದ್ದಾರಂತೆ.
ಮೆಗಾ ಸ್ಟಾರ್ ಚಿರಂಜೀವಿ ನಾಯಕನಾಗಿರೋ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿಯ ಕಥೆಯಾಧಾರಿತ ಚಿತ್ರ. ಮೆಗಾ ಸ್ಟಾರ್ ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡುವ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇತಿಹಾಸದಲ್ಲಿಯೂ ಕೂಡಾ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ಅವುಕು ರಾಜನ ಕ್ರಾಂತಿಯ ಬಗ್ಗೆ ಉಲ್ಲೇಖಗಳಿವೆ. ಈ ಮೂಲಕ ಸುದೀಪ್ ಐತಿಹಾಸಿಕ ಚಿತ್ರದಲ್ಲಿನ ಖದರು ತುಂಬಿರೋ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಬಹು ಕಾಲದಿಂದಲೂ ಕೂಡಾ ತೆಲುಗಿನ ಕಿಚ್ಚನ ಅಭಿಮಾನಿಗಳು ಅವರ ನಟನೆಗಾಗಿ ಕಾದು ಕೂತಿದ್ದರು. ಅವರೆಲ್ಲ ಸುದೀಪ್ ಸೈರಾ ಚಿತ್ರದಲ್ಲಿ ನಟಿಸುವ ಸುದ್ದಿ ಕೇಳಿ ಸಂತಸಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv