ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಹೊರಬಿದ್ದಿದ್ದು, ಇದರಲ್ಲಿ ನಾಲ್ವರು ಅತ್ಯಂತ ಕಿರಿಯ ಸಂಸದರಾಗಿ ಸಂಸತ್ ಪ್ರವೇಶಿಸಲು ಸಿದ್ಧರಾಗಿದ್ದಾರೆ.
ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಸಮಾಜವಾದಿ ಪಕ್ಷದ (SP) ಟಿಕೆಟ್‌ನಲ್ಲಿ ಸ್ಪರ್ಧಿಸಿದರೆ, ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರನ್ನು ಕ್ರಮವಾಗಿ ಲೋಕ ಜನಶಕ್ತಿ ಪಕ್ಷ (LJP) ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗಿದೆ. ಇದೀಗ ಈ 4 ಅಭ್ಯರ್ಥಿಗಳು ಬಿಹಾರ, ಯುಪಿ, ರಾಜಸ್ಥಾನದ ಸ್ಥಾನಗಳಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ 25 ವರ್ಷ ವಯಸ್ಸಿನವರಾಗಿದ್ದು, ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸದಸ್ಯರು ಎನಿಸಿಕೊಂಡಿದ್ದಾರೆ.
Advertisement
Advertisement
ನಾಲ್ವರ ವಿವರ ಇಲ್ಲಿದೆ:
* ಶಾಂಭವಿ ಚೌಧರಿ: ಬಿಹಾರದ ನಿತೀಶ್ ಕುಮಾರ್ ಸಂಪುಟದ ಸಚಿವ ಅಶೋಕ್ ಚೌಧರಿ ಅವರ ಪುತ್ರಿಯಾಗಿರುವ ಶಾಂಭವಿ (Shambhavi Choudhary), ಬಿಹಾರದ ಸಮಸ್ತಿಪುರ್ ಕ್ಷೇತ್ರದಲ್ಲಿ LJP ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.
Advertisement
ಶಾಂಭವಿ ಚೌಧರಿಯವರು ಕಾಂಗ್ರೆಸ್‌ನ ಸನ್ನಿ ಹಜಾರಿಯವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಸನ್ನಿ ಹಜಾರಿ ಜೆಡಿಯು ಸಚಿವ ಮಹೇಶ್ವರ್ ಹಜಾರಿ ಅವರ ಪುತ್ರ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಶಾಂಭವಿ ಎನ್‌ಡಿಎ ಕಿರಿಯ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದರು.
Advertisement
* ಸಂಜನಾ ಜಾತವ್: ಇವರು ರಾಜಸ್ಥಾನದ ಭರತ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. 25ರ ಹರೆಯದ ಸಂಜನಾ, ಬಿಜೆಪಿಯ ರಾಮಸ್ವರೂಪ್ ಕೋಲಿ ಅವರನ್ನು 51,983 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಸಂಜನಾ (Sanjana Jatav), ಬಿಜೆಪಿಯ ರಮೇಶ್ ಖೇಡಿ ವಿರುದ್ಧ ಕೇವಲ 409 ಮತಗಳಿಂದ ಸೋತಿದ್ದರು. ಸಂಜನಾ ರಾಜಸ್ಥಾನದ ಪೊಲೀಸ್ ಪೇದೆ ಕಪ್ತಾನ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.
* ಪುಷ್ಪೇಂದ್ರ ಸರೋಜ್: ಉತ್ತರಪ್ರದೇಶದ ಕೌಶಂಬಿ ಸಂಸದೀಯ ಸ್ಥಾನದಿಂದ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿ ಪುಷ್ಪೇಂದ್ರ (Pushpendra Saroj) ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರನ್ನು ಪುಷ್ಪೇಂದ್ರ ಅವರು 1,03,944 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪುಷ್ಪೇಂದ್ರ ಅವರು ಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, 5 ಬಾರಿ ಶಾಸಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಇಂದರ್‌ಜಿತ್ ಸರೋಜ್ ಅವರ ಪುತ್ರ. ಪುಷ್ಪೇಂದ್ರ ಸರೋಜ್ ಬಿಎಸ್‌ಸಿ ಮುಗಿಸಿದ ನಂತರ ರಾಜಕೀಯಕ್ಕೆ ಧುಮುಕಿದರು.
* ಪ್ರಿಯಾ ಸರೋಜ್: 25 ವರ್ಷದ ಪ್ರಿಯಾ ಸರೋಜ್ (Priya Saroj) ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದಾರೆ.