ಒಂದು ವರ್ಷದಲ್ಲಿ 170 ಕೋಟಿ ದಾನ ಮಾಡಿದ ಇನ್ಫೋಸಿಸ್‌ ಸಹ-ಸಂಸ್ಥಾಪಕರ ಪತ್ನಿ ರೋಹಿಣಿ ನಿಲೇಕಣಿ

Public TV
2 Min Read
rohini nilekani

– ಟಾಪ್‌ 10 ದಾನಿಗಳಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ
– ಪ್ರತಿ ದಿನ 46 ಲಕ್ಷ ರೂ. ದಾನ

ನವದೆಹಲಿ: ಹುರೂನ್‌ ಇಂಡಿಯಾ (Hurun) ಸಂಸ್ಥೆಯು ದೇಶದ 119 ದಾನಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಗ್ರ 10 ರಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ಇನ್ಫೋಸಿಸ್‌ ಸಹ ಸಂಸ್ಥಾಪಕರಾದ ನಂದನ್‌ ನಿಲೇಕಣಿ (Nandan Nilekani) ಅವರ ಪತ್ನಿ ರೋಹಿಣಿ ನಿಲೇಕಣಿ (Rohini Nilekani) ಅವರಾಗಿದ್ದಾರೆ.

ಭಾರತದ ಲೇಖಕಿ ರೋಹಿಣಿ ನಿಲೇಕಣಿ (64) ಅವರು ಒಂದು ವರ್ಷದ ಅವಧಿಯಲ್ಲಿ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಗೆ ಬರೋಬ್ಬರಿ 170 ಕೋಟಿ ರೂ. ದಾನ ಮಾಡಿದ್ದಾರೆ. ಪ್ರತಿ ದಿನ 46 ಲಕ್ಷ ರೂ. ದಾನ ಮಾಡಿದ ಕೊಡುಗೈ ದಾನಿಯಾಗಿ ಗಮನ ಸೆಳೆದಿದ್ದಾರೆ. ಗಮನಾರ್ಹ ಅಂಶವೆಂದರೆ, ರೋಹಿಣಿ ಅವರ ಪತಿ ನಂದನ್‌ ನಿಲೇಕಣಿ ಅವರು ಅಗ್ರ 10 ಮಂದಿ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದ್ದಾರೆ.

Infosys 2

ಯಾರು ಈ ರೋಹಿಣಿ ನಿಲೇಕಣಿ?
ದಾನಿ ರೋಹಿಣಿ ನಿಲೇಕಣಿ ಅವರು ಭಾರತೀಯ ಕಾದಂಬರಿಕಾರರಾಗಿದ್ದಾರೆ. ಅವರು ಲಾಭರಹಿತ ಶೈಕ್ಷಣಿಕ ವೇದಿಕೆ EkStep ಮತ್ತು ಮಕ್ಕಳ ಪುಸ್ತಕ ಕಂಪನಿ ಪ್ರಥಮ್ ಬುಕ್ಸ್ ಸಹ-ಸ್ಥಾಪಕಿಯೂ ಆಗಿದ್ದಾರೆ. ಶುದ್ಧ ನೀರು ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ರಾಷ್ಟ್ರೀಯ ಉಪಕ್ರಮಗಳಿಗೆ ಸಹಾಯ ಮಾಡಲು ಅರ್ಘ್ಯಮ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ.

ರೋಹಿಣಿ ಅವರು ಬಾಂಬೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಇಂಜಿನಿಯರ್ ಆಗಿದ್ದರೆ, ತಾಯಿ ಗೃಹಿಣಿ. ಅವರು ಎಲ್ಫಿನ್‌ಸ್ಟೋನ್ ಕಾಲೇಜಿನಿಂದ ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಪಡೆದರು. ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ 1980 ರಲ್ಲಿ ಬಾಂಬೆ ಮ್ಯಾಗಜೀನ್‌ನಲ್ಲಿ ವರದಿಗಾರರಾಗಿ ಕೆಲಸ ಮಾಡಿದರು. ನಂತರ ಬೆಂಗಳೂರಿನಲ್ಲಿ ಸಂಡೇ ಮ್ಯಾಗಜೀನ್‌ನಲ್ಲೂ ವೃತ್ತಿ ಜೀವನ ಆರಂಭಿಸಿದ್ದರು.

Nandan Nilekani

ರೋಹಿಣಿ ಅವರು ಪುಸ್ತಕಗಳನ್ನು ಸಹ ಬರೆದಿದ್ದಾರೆ. ‘ಸ್ಟಿಲ್‌ಬಾರ್ನ್‌’ ಅವರು ಬರೆದ ಮೊದಲ ಪುಸ್ತಕ. ‘ಅನ್‌ಕಾಮನ್‌ ಗ್ರೌಂಡ್’‌, ‘ಹಂಗ್ರಿ ಲಿಟಲ್ ಸ್ಕೈ ಮಾನ್ಸ್ಟರ್’ ಪುಸ್ತಕಗಳನ್ನು ಬರೆದಿದ್ದಾರೆ.

ಹುರೂನ್‌ ಇಂಡಿಯಾ ಬಿಡುಗಡೆ ಮಾಡಿದ ದಾನಿಗಳ ಪಟ್ಟಿಯಲ್ಲಿ ಹೆಚ್‌ಸಿಎಲ್‌ ಸಂಸ್ಥಾಪಕ ಶಿವ ನಡಾರ್‌ ಮೊದಲ ಸ್ಥಾನದಲ್ಲಿದ್ದಾರೆ. ಅವರು ವರ್ಷಕ್ಕೆ 2,042 ಕೋಟಿ ರೂ. ದಾನ ಮಾಡಿ ಮಹಾದಾನಿಯಾಗಿ ಹೊರಹೊಮ್ಮಿದ್ದಾರೆ.

Web Stories

Share This Article