ರಾಂಚಿ: ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವ ಭಿಕ್ಷುಕವೊಬ್ಬ ಜಾರ್ಖಂಡ್ ನ ರಾಂಚಿಯಲ್ಲಿ ಪತ್ತೆಯಾಗಿದ್ದಾನೆ.
ಜಾರ್ಖಂಡ್‍ನ ರಾಂಚಿಯನ್ನು ತನ್ನ ‘ರಾಜಧಾನಿ’ ಮಾಡಿಕೊಂಡಿರುವ ಚೋಟು ಬೈರಕ್ (40) ಎಂಬ ಹೆಸರಿನ ಈ ‘ಕುಬೇರ ಭಿಕ್ಷುಕ’ನದು ವೈಭವೋಪೇತ ಬದುಕು. ಹೆಸರಿಗೆ ಮಾತ್ರ ಈತ ಚೋಟು ಆದರೆ ಸಂಪಾದನೆಯಲ್ಲಿ ಮಾತ್ರ ಮೋಟು ಆಗಿದ್ದಾನೆ.
ಜಾರ್ಖಂಡ್‍ನ ಚಕ್ರಧರ್‍ಪುರ್ ರೈಲ್ವೆ ನಿಲ್ದಾಣವೇ ಈತನ ಭಿಕ್ಷಾಟನೆಯ ಅಡ್ಡವಾಗಿದ್ದು, ಜೊತೆಗೆ ಮೂವರು ಪತ್ನಿಯರನ್ನು ರಾಣಿಯರಂತೆ ಸಾಕುತ್ತಿದ್ದಾನೆ. ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಹುಟ್ಟಿನಿಂದಲೇ ಸೊಂಟದಲ್ಲಿ ಬಲವಿರಲಿಲ್ಲ. ಆದ್ದರಿಂದ ಚಿಕ್ಕಂದಿನಿಂದಲೇ ಭಿಕ್ಷೆ ಬೇಡುವ ಕಾಯಕಕ್ಕಿಳಿದಿದ್ದಾನೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ.
ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಇದೀಗ ಪಾತ್ರೆ ಅಂಗಡಿಯೊಂದನ್ನು ಬೇರೆ ತೆರೆದಿದ್ದಾನೆ. ಇನ್ನೊಂದು ವಿಶೇಷ ಸಂಗತಿ ಏನಪ್ಪಾ ಅಂದರೆ ಭಿಕ್ಷಾಟನೆ ಮತ್ತು ಪಾತ್ರೆ ಅಂಗಡಿ ‘ಬಿಸಿನೆಸ್’ ಜೊತೆ ಚೋಟು ಮಹಾಶಯ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಕೂಡ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆಯಂತೆ.
ಚೋಟುಗೆ ಮೂವರು ಹೆಂಡತಿಯರಿದ್ದು, ಮೂವರಿಗೂ ಇಷ್ಟು ಹಣ ಎಂದು ಅವರಿಗೆ ನೀಡುತ್ತಾನೆ. ಮೊದಲ ಹೆಂಡತಿ ಪಾತ್ರೆ ಅಂಗಡಿಯಲ್ಲಿ ನೋಡಿಕೊಂಡರೆ, ಇನ್ನಿಬ್ಬರು ಹೆಂಡತಿಯರು ಚಿಕ್ಕಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.