– ಸಭೆಯಲ್ಲಿ ಅನುಚಿತ ವರ್ತನೆ, ಗಾಜಿನ ಬಾಟೆಲ್ ಒಡೆದು ಎಸೆದ ಆರೋಪ
ಕೋಲ್ಕತ್ತಾ: ವಕ್ಫ್ ಬೋರ್ಡ್ ಬಿಲ್‌ಗೆ ತಿದ್ದುಪಡಿ ತರುವ ಕುರಿತು ಚರ್ಚಿಸಲು ಸೇರಿದ್ದ ಜಂಟಿ ಸಂಸದೀಯ ಸಮಿತಿಯ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆಯಿತು.
ವಕ್ಫ್ ಬಿಲ್ ಜಂಟಿ ಸಂಸದೀಯ ಸಮಿತಿ ಮುಖ್ಯಸ್ಥ ಜಗದಾಂಬಿಕಾ ಪಾಲ್ ವಿರುದ್ಧ ಅನುಚಿತ ವರ್ತನೆ, ಅಸಾಂವಿಧಾನಿಕ ಪದ ಬಳಕೆ ಹಾಗೂ ಗಾಜಿನ ಬಾಟೆಲ್ ಒಡೆದು ಪಾಲ್ ಮೇಲೆ ಎಸೆದ ಆರೋಪದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಅಮಾನತು ಮಾಡಲಾಗಿದೆ.
ಬ್ಯಾನರ್ಜಿ ಅವರನ್ನು 1 ದಿನ ಹಾಗೂ 2 ಸಭೆಗಳಿಂದ ಅಮಾನತು ಮಾಡಲಾಗಿದೆ. ಗಾಜಿನ ಬಾಟಲ್ ಒಡೆದು ಜಗದಂಬಿಕಾ ಪಾಲ್ ಮೇಲೆ ಎಸೆದ ಆರೋಪ ಕೇಳಿಬಂದಿದೆ. ಗಾಜಿನ ಬಾಟಲ್ ಒಡೆದಾಗ ಕಲ್ಯಾಣ್ ಬ್ಯಾನರ್ಜಿ ಕೈಗೆ ಗಾಯವಾಗಿದೆ.
ಬಿಜೆಪಿ ಲೋಕಸಭೆಯ ಸಂಸದ ನಿಶಿಕಾಂತ್ ದುಬೆ ಅವರು ಒಂಬತ್ತು ಸದಸ್ಯರ ಬೆಂಬಲದೊಂದಿಗೆ ನಿರ್ಣಯವನ್ನು ಮಂಡಿಸಿದ ನಂತರ ಅವರನ್ನು ಅಮಾನತುಗೊಳಿಸಲಾಯಿತು. ಆದರೆ ಎಂಟು ಮಂದಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಜೆಪಿಸಿ ಅಧ್ಯಕ್ಷೆ ಮತ್ತು ಬಿಜೆಪಿ ಲೋಕಸಭಾ ಸಂಸದ ಜಗದಾಂಬಿಕಾ ಪಾಲ್ ಅವರು ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ.