-ಮನನೊಂದು ನ್ಯಾಯಕ್ಕಾಗಿ ಮೊರೆಹೋದ ಪತಿ
ಲಕ್ನೋ: ಮೂಢನಂಬಿಕೆಗೆ ಕಟ್ಟುಬಿದ್ದು, ತಾಂತ್ರಿಕನ ಮಾತು ಕೇಳಿ ಪತ್ನಿಯೊಬ್ಬಳು ತನ್ನ ಪತಿಗೆ ತಿನ್ನಲು ಮೂರು ಹೊತ್ತು ಬರೀ ಲಾಡು ನೀಡುತ್ತಿದ್ದಳು. ಇದರಿಂದ ಬೇಸತ್ತ ಪತಿ ನ್ಯಾಯಕೊಡಿಸಿ ಎಂದು ಮೊರೆಯಿಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.
ಮೀರತ್‍ನ ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ಇಂತಹದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ದೌರಾಲಾ ನಿವಾಸಿಯೊಬ್ಬ ತನ್ನ ಪತ್ನಿ ವಿರುದ್ಧ ವಿಚಿತ್ರ ಆರೋಪ ಮಾಡಿದ್ದಾನೆ. ತಾಂತ್ರಿಕನ ಸಲಹೆ ಮೇರೆಗೆ ತನ್ನ ಪತ್ನಿ, ತನಗೆ ತಿನ್ನಲು ಕೇವಲ ಲಾಡು ನೀಡುತ್ತಾಳೆ. ಇದರಿಂದ ಬಹಳ ತೊಂದರೆ ಆಗುತ್ತಿದೆ ಎಂದು ಪತಿ ನ್ಯಾಯಾಕ್ಕಾಗಿ ಕುಟುಂಬ ಸಮಾಲೋಚನಾ ಕೇಂದ್ರದ ಮೊರೆ ಹೋಗಿದ್ದಾನೆ. ಇದನ್ನೂ ಓದಿ:ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು
ಕೆಲ ದಿನಗಳ ಹಿಂದೆ ಪತಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಪತ್ನಿ, ತಾಂತ್ರಿಕನ ಮೊರೆ ಹೋಗಿದ್ದಳು. ಆಗ ತಾಂತ್ರಿಕ ಪತಿಗೆ ಲಾಡು ಮಾತ್ರ ಆಹಾರ ರೂಪದಲ್ಲಿ ನೀಡಬೇಕು. ಬೆಳಗ್ಗೆಯಿಂದ ಸಂಜೆಯವರೆಗೂ ಕೇವಲ ಲಾಡು ಮಾತ್ರ ಕೊಡು, ಆಗ ನಿನ್ನ ಪತಿಯ ಆರೋಗ್ಯ ಸರಿಹೋಗುತ್ತೆ ಎಂದು ಸಲಹೆ ನೀಡಿದ್ದನು. ಇದನ್ನು ನಂಬಿದ ಪತ್ನಿ ಪತಿಗೆ ಕೇವಲ ಲಾಡು ಮಾತ್ರ ನೀಡುತ್ತಿದ್ದಳು. ಬೇರೆ ಆಹಾರವನ್ನು ಪತಿ ಕೇಳಿದರೆ ಕೊಡುತ್ತಿರಲಿಲ್ಲ. ಪತ್ನಿಯ ಮೂಢನಂಬಿಕೆ ಪತಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಪತ್ನಿಯ ವರ್ತನೆಗೆ ಬೇಸತ್ತ ಪತಿ ನ್ಯಾಯಕೊಡಿಸಿ, ಇದರಿಂದ ಪಾರುಮಾಡಿ ಎಂದು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ದೂರು ನೀಡಿದ್ದಾನೆ.
ಸಮಾಲೋಚನಾ ಕೇಂದ್ರದಲ್ಲಿ ಪತಿಯ ದೂರು ಆಲಿಸಿದ ಕೌನ್ಸಿಲರ್ ದಂಗಾಗಿದ್ದಾರೆ. ಈ ರೀತಿ ಘಟನೆಯನ್ನು ನಾವು ನೋಡಿಲ್ಲ ಎಂದು ಅಚ್ಚರಿಪಟ್ಟಿದ್ದಾರೆ. ಸದ್ಯ ಈ ಬಗ್ಗೆ ಅಧಿಕಾರಿಗಳು ದಂಪತಿಯ ಕೌನ್ಸಿಲಿಂಗ್ ನಡೆಸುತ್ತಿದ್ದು, ಅವರನ್ನು ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.