ಮಂಡ್ಯ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿಯ ಮೃತದೇಹ ಪಡೆಯುವ ವಿಷಯದಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ತಳ್ಳಾಟ, ನೂಕಾಟ ನಡೆದು ಮಾತಿನ ಚಕಮಕಿ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯದ ಮಿಮ್ಸ್ ನಲ್ಲಿ ಪ್ಯಾರ ಮೆಡಿಕಲ್ ಓದುತ್ತಿದ್ದ ಲಕ್ಷ್ಮೇಗೌಡನದೊಡ್ಡಿ ಗ್ರಾಮದ ವಿದ್ಯಾರ್ಥಿನಿ ಭವ್ಯಾ ಮೂರು ದಿನಗಳ ಹಿಂದೆ ಬಸ್ಸಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ನಂತರ ಚಿಕಿತ್ಸೆಗಾಗಿ ಮಂಡ್ಯದ ಸಾಂಜೋ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಭವ್ಯಾ ಇಂದು ಮೃತಪಟ್ಟಿದ್ದಾಳೆ.
Advertisement
ಹಣದ ಆಸೆಯಿಂದ ಮೃತ ಭವ್ಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಲು ಸಾಂಜೋ ಅಸ್ಪತ್ರೆ ಆಡಳಿತ ನಿರಾಕರಿಸುತ್ತಿದೆ ಎಂದು ಆರೋಪಿಸಿ ಲಕ್ಷ್ಮೆಗೌಡನ ದೊಡ್ಡಿಯ ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದರು. ಈ ಸಂಧರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ನಡೆದಿದೆ.
Advertisement
ಗಲಾಟೆಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಗ್ರಾಮಸ್ಥರು ಅವರ ವಿರುದ್ಧವೂ ಆಕ್ರೋಶ ಹೊರಹಾಕಿದ್ದು, ತಳ್ಳಾಡಿ ಬೈದಿದ್ದಾರೆ. ನಂತರ ಮಂಡ್ಯ ಡಿವೈಎಸ್‍ಪಿ ಗಂಗಧರಸ್ವಾಮಿ ನೇತೃತ್ವದ ಪೊಲೀಸರ ತಂಡ ಬಿಗಿ ಬಂದೋಬಸ್ತ್ ನೊಂದಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Advertisement