– ಕುಂಟುತ್ತಲೇ ಆಸ್ಪತ್ರೆಯೊಳಗೆ ಬಂದ ದರ್ಶನ್
– ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಮನೆಗೆ ವಾಪಸ್
ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿರುವ ಆರೋಪಿ ನಟ ದರ್ಶನ್ (Darshan) ಚಿಕಿತ್ಸೆಗಾಗಿ ಇಂದು (ನ.1) ಬೆಂಗಳೂರಿನ ಕೆಂಗೇರಿ ಬಳಿಯಿರುವ ಬಿಜಿಎಸ್ ಆಸ್ಪತ್ರೆ (BGS Hospital) ತಲುಪಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ಭದ್ರತೆಯೊಂದಿಗೆ (Police security) ಮನೆಯಿಂದ ಹೊರಟಿದ್ದ ದರ್ಶನ್ 3 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಕೂಡ ಜೊತೆಯಲ್ಲಿದ್ದರು. ಆಸ್ಪತ್ರೆ ಆವರಣಕ್ಕೆ ಬಂದ ಬಳಿಕ ಕುಂಟುತ್ತಲೇ ನಟ ಧನ್ವೀರ್ ಕೈ ಹಿಡಿದು ಒಳಗೆ ತೆರಳಿದರು. ಈ ವೇಳೆ ದರ್ಶನ್ ಭೇಟಿಗಾಗಿ ನಟಿ ಅಮೂಲ್ಯ, ಪತ್ನಿ ಜಗದೀಶ್ ಸಹ ಧಾವಿಸಿದ್ದರು.
ಸದ್ಯ ತಜ್ಞವೈದ್ಯರು ಪ್ರಾಥಮಿಕ ಕಾರ್ಯ ಶುರು ಮಾಡಿದ್ದು, ರೋಗಿಯ ಹೆಸರು ವಿವರ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡಲಿರುವ ವೈದ್ಯರು, ಬಳಿಕ ಮುಂದಿನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ. ಇಂದು ದರ್ಶನ್ ಬೆನ್ನುನೋವಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಗಿಸಿದ ನಂತರ ನಟ ಮನೆಗೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.
ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ:
ದರ್ಶನ್ ಚಿಕಿತ್ಸೆಗೆ ದಾಖಲಾದ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಈಗಾಗಲೇ ದರ್ಶನ್ ಕುಟುಂಬದವರು ಬೆನ್ನುನೋವಿನ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಫಿಸಿಯೋ ಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಮನವಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಕುಟುಂಬ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಇಬ್ಬರು ತಜ್ಞರ ಸಲಹೆ ಪಡೆದಿದ್ದ ದರ್ಶನ್ ಕುಟುಂಬ:
ದರ್ಶನ್ ಕುಟುಂಬಸ್ಥರು ಗುರುವಾರ ಸಂಜೆಯೇ ನರ ರೋಗ ತಜ್ಞ ಡಾ.ನವೀನ್ ಅವರಿಂದ ಬೆನ್ನುನೋವಿನ ಕುರಿತು ಆರೋಗ್ಯ ಸಲಹೆ ಪಡೆದುಕೊಂಡಿದ್ದರು. ಮೊಬೈಲ್ ನಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಪ್ರತಿ ಕಳುಹಿಸಿ ತಜ್ಞ ವೈದ್ಯರ ಅಭಿಪ್ರಾಯ ಪಡೆದುಕೊಂಡಿದ್ದರು. ಅದೇ ರೀತಿ ಜಯನಗರದ ಅಪೊಲೋ ಆಸ್ಪತ್ರೆಯ ವೈದ್ಯರಾದ ಡಾ. ಕೃಷ್ಣ ಚೈತನ್ಯ ಅವರನ್ನೂ ಕುಟುಂಬ ಸಂಪರ್ಕಿಸಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ಬರೋಬ್ಬರಿ 5 ತಿಂಗಳ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಮೊನ್ನೆಯಷ್ಟೇ ಜೈಲಿನಿಂದ ರಿಲೀಸ್ ಆಗಿದ್ದರು. ಬೆನ್ನುನೋವಿನ ಉಲ್ಬಣಗೊಂಡ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಷರತ್ತುಬದ್ಧ ಜಾಮೀನನ್ನು ಕೋರ್ಟ್ ಮಂಜೂರು ಮಾಡಿತ್ತು. ಆಸ್ಪತ್ರೆಗೆ ದಾಖಲಾದ ಒಂದು ವಾರದ ಬಳಿಕ ವೈದ್ಯಕೀಯ ವರದಿ ನೀಡುವಂತೆ ಕೋರ್ಟ್ ಷರತ್ತು ವಿಧಿಸಿದೆ.