ಬೆಂಗಳೂರು: ಪ್ರಸಕ್ತ 2025ನೇ ಸಾಲಿನ ವೈದ್ಯಕೀಯ (Medical) ಮತ್ತು ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ (ಅ.24) ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪಣೆಯಿದ್ದಲ್ಲಿ ಅ.25ರ ಬೆಳಿಗ್ಗೆ 10ರೊಳಗೆ ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಬಂದು ಬರೆದು ತಿಳಿಸಬಹುದು ಅಥವಾ keauthority-ka@nic.inಗೆ ಇ-ಮೇಲ್ ಕಳಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚಿಸಿದೆ.
ಅಖಿಲ ಭಾರತ ಕೋಟಾ ಅಡಿಯ ಮೂರನೇ ಸುತ್ತಿನಲ್ಲಿ ಪಾಲ್ಗೊಂಡು ಸೀಟು ಪಡೆಯುವ ಜೊತೆಗೆ ಕೆಇಎ ಮೂರನೇ ಸುತ್ತಿನಲ್ಲಿಯೂ ಸೀಟು ಪಡೆದಿರುವ ಅಭ್ಯರ್ಥಿಗಳು ಕೆಇಎ ಸೀಟು ಉಳಿಸಿಕೊಳ್ಳಲು ಇಚ್ಛಿಸಿದಲ್ಲಿ ಅ.25ರ ಮಧ್ಯಾಹ್ನ 12:30ರೊಳಗೆ ಕೆಇಎ ಕಚೇರಿಗೆ ಬಂದು ಖುದ್ದು ಮನವಿ ನೀಡಬೇಕು ಅಥವಾ ತಾವು ಅರ್ಜಿಯಲ್ಲಿ ನಮೂದಿಸಿದ್ದ ಇ-ಮೇಲ್ ಐ.ಡಿ.ಯಿಂದ keauthority-ka@nic.iಗೆ ಇ-ಮೇಲ್ ಕಳಿಸಬೇಕು. ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳನ್ನು 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ ಹಾಗೂ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಹಿಂದಿರುಗಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?
ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅ.27ರ ಮಧ್ಯಾಹ್ನ 12ರ ನಂತರ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಅ.30ರೊಳಗೆ ಉಳಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿ, ಸೀಟು ಖಾತರಿ ಚೀಟಿಯನ್ನು ಡೌನ್ ಲೋಡ್ ಮಾಡಿಕೊಂಡು ಆಯಾ ಕಾಲೇಜಿಗೆ ಎಲ್ಲ ಮೂಲದಾಖಲೆಗಳೊಂದಿಗೆ ತೆರಳಿ ಪ್ರವೇಶ ಪಡೆಯಬೇಕು ಎಂದು ತಿಳಿಸಲಾಗಿದೆ.
ಈ ಸುತ್ತಿನಲ್ಲಿ ಅಂತಿಮ ಸೀಟು ಹಂಚಿಕೆಯಾದ ನಂತರ ಅದರ ರದ್ದತಿಗಾಗಿ ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಥವಾ ಸೀಟು ರದ್ದುಪಡಿಸಲು ಇಚ್ಛೆಪಟ್ಟರೆ ಅಥವಾ ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಭ್ಯರ್ಥಿ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ನಿಯಮದ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಆಳಂದದಲ್ಲಿ 80 ರೂ.ಗೆ ವೋಟ್ ಡಿಲೀಟ್ ಸಾಕ್ಷಿ ಸಿಕ್ಕಿದೆ, ಚುನಾವಣಾ ಆಯೋಗ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಆಗ್ರಹ

