ಮಡಿಕೇರಿ: ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರ ಸುದ್ದಿಗೋಷ್ಠಿಯನ್ನು ಮಾಧ್ಯಮಗಳು ಬಹಿಷ್ಕರಿಸಿದ ಪ್ರಸಂಗ ಇಂದು ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ಕೋಟೆ ಸಭಾಂಗಣದಲ್ಲಿ ಇಂದು ಕೊಡಗು ಜಿಲ್ಲಾ ಪ್ರಾಕೃತಿಕ ವಿಕೋಪ ಸಂತ್ರಸ್ತರ ಸಭೆ ಆಯೋಜನೆಗೊಂಡಿತ್ತು. ಈ ಸಭೆಯಲ್ಲಿ ಸಚಿವರು ನಡೆದುಕೊಂಡ ರೀತಿಯಿಂದಾಗಿ ಎಲ್ಲ ಮಾಧ್ಯಮಗಳು ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿವೆ.
ಆಗಿದ್ದೇನು?
ಕೊಡಗು ಜಿಲ್ಲಾ ಪ್ರಾಕೃತಿಕ ವಿಕೋಪ ಸಂತ್ರಸ್ತರ ಸಭೆ ನಡೆದಿತ್ತು. ವಾರ್ತಾ ಇಲಾಖೆಯಿಂದ ಆಹ್ವಾನ ಬಂದ ಹಿನ್ನೆಲೆಯಲ್ಲಿ ಪತ್ರಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಸಭೆ ಆರಂಭಕ್ಕೂ ಮುನ್ನ ಕುಳಿತ್ತಿದ್ದ ಮಾಧ್ಯಮದ ವ್ಯಕ್ತಿಗಳನ್ನು ಉದ್ದೇಶಿಸಿ, ಈಗ ಹೊರಗೆ ಹೋಗಿ. ನಾನು ಕರೆದಾಗ ಬನ್ನಿ ಎನ್ನುವ ಮೂಲಕ ಸಚಿವರು ದರ್ಪ ಮೆರೆದರು.
ಇದನ್ನು ಮಾಧ್ಯಮದವರು ಖಂಡಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಸಭೆಗೆ ತನ್ನದೆಯಾದ ರೀತಿ ನೀತಿಗಳಿವೆ. ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಹೊರಗೆ ಹೋಗಿ. ರಾತ್ರಿಯಾದರೂ ಸಭೆ ನಡೆಸಿ ಪ್ರತಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಹೇಳಿದ್ದರು.
ಸಂತ್ರಸ್ತರ ಜೊತೆ ಸಭೆ ನಡೆಸಿದ ಬಳಿಕ ಸಾರಾ ಮಹೇಶ್ ಮಾಧ್ಯಮದವರನ್ನು ಸುದ್ದಿಗೋಷ್ಠಿಗೆ ಬರುವಂತೆ ತಿಳಿಸಿದರು. ಈ ವೇಳೆ ಮಾಧ್ಯಮದವರು ಸಭೆಯಿಂದ ನಮ್ಮನ್ನು ಹೊರಹಾಕಿದ್ದಕ್ಕೆ ಬರುವುದಿಲ್ಲ ಎಂದು ಹೇಳಿ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದ್ದಾರೆ.
ಸಚಿವ ಸಾ.ರಾ ಮಹೇಶ್ ನೇತೃತ್ವದಲ್ಲಿ ನಡೆದ ಸಭೆಗೆ ಭಾರೀ ಭದ್ರತೆ ನೀಡಲಾಗಿತ್ತು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್, ಎಸ್‍ಪಿ ಡಿ.ಸುಮನ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಕೇವಲ ಸಂತ್ರಸ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.