ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿಂದು ಅಲ್ಲೋಲ ಕಲ್ಲೋಲವಾಗಿದೆ. ಕಳೆದ ಕೆಲ ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು (Silver Rate) ಶುಕ್ರವಾರ (ಇಂದು) MCX (ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ) ನಲ್ಲಿ ದಿಢೀರ್ ಕುಸಿತ ಕಂಡಿವೆ. ಏರಿಕೆ ಓಟದಲ್ಲಿದ್ದ ಚಿನ್ನದ ಬೆಲೆ (Gold Rate) ಶೇ.10 ರಷ್ಟು ಹಾಗೂ ಬೆಳ್ಳಿಯ ದರ ಶೇ.15 ರಷ್ಟು ಕುಸಿತ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥರ ಬದಲಾವಣೆಯ ಊಹಾಪೋಹಗಳ ನಡುವೆ ಅಮೂಲ್ಯ ಲೋಹಗಳ ಬೆಲೆ ತಗ್ಗಿವೆ. ಇದು ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಧಿಕ ಕುಸಿತವಾಗಿದೆ.

ಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ, ಗುರುವಾರ ಚಿನ್ನದ ಬೆಲೆ 10 ಗ್ರಾಮ್‌ಗೆ ದಾಖಲೆಯ 1.75 ಲಕ್ಷ ರೂ.ಗೆ ಏರಿಕೆ ಕಂಡಿತ್ತು, ಜೊತೆಗೆ ಬೆಳ್ಳಿ ಪ್ರತಿ ಕೆಜಿಗೆ 4 ಲಕ್ಷ ರೂ.ಗೆ ಜಿಗಿದಿತ್ತು. ಆದ್ರೆ ಜ.30 (ಇಂದು) ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಭಾರೀ ಕುಸಿತ ಕಂಡಿವೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಏಪ್ರಿಲ್ ಎಕ್ಸ್‌ಪೈರಿಯ ಚಿನ್ನದ ಫ್ಯೂಚರ್ಸ್ ದರವು ಸುಮಾರು ಶೇ.1.88 ರಷ್ಟು ಕುಸಿದು, 10 ಗ್ರಾಂಗೆ 1,80,499 ರೂ. ಗಳಲ್ಲಿ ವಹಿವಾಟು ನಡೆಸುತ್ತಿದೆ. ಇದು 10 ಗ್ರಾಂ ಚಿನ್ನಕ್ಕೆ ಸುಮಾರು 12,000 ರೂ.ಗಳಷ್ಟು ಕುಸಿತ ಕಂಡಿರುವುದು ಸೂಚಿಸಿದೆ. ಕೇವಲ ಒಂದು ದಿನದ ಹಿಂದಷ್ಟೇ ಚಿನ್ನದ ಎಂಸಿಎಕ್ಸ್ ದರ 10 ಗ್ರಾಂಗೆ 1,93,096 ರೂ. ತಲುಪಿ ಸಾರ್ವಕಾಲಿಕ ದಾಖಲೆ ಬರೆದಿತ್ತು ಎಂಬುದು ಗಮನಾರ್ಹ.

ಇನ್ನೂ ಎಂಸಿಎಕ್ಸ್‌ನಲ್ಲಿ 3,99,893 ರೂ.ನಲ್ಲಿ ವಹಿವಾಟು ನಡೆಸಿದ ಬೆಳ್ಳಿ ಪ್ರತಿ ಕೆಜಿಗೆ ಶೇ.4 ರಷ್ಟು (ಸುಮಾರು 48,000 ರೂ.) ಇಳಿಕೆಯಾಗಿ ಕೆಜಿ 3,83,898 ರೂ.ಗಳಿಗೆ ವಹಿವಾಟು ನಡೆಸಿದೆ. ಗುರುವಾರ ಕೆಜಿ ಬೆಳ್ಳಿ 4.20 ಲಕ್ಷ ರೂ.ಗೆ ತಲುಪಿತ್ತು ಅನ್ನೋದು ಗಮನಾರ್ಹ.

