Connect with us

Latest

ಅಂಕಿ ಅಂಶಗಳಲ್ಲಿ ದೆಹಲಿ ದರ್ಬಾರ್: ಈ ಬಾರಿ ಗದ್ದುಗೆ ಯಾರಿಗೆ?

Published

on

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಬಳಿಕ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ದೆಹಲಿ ಮಹಾನಗರ ಪಾಲಿಕೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ.

14 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯೂ ಲೋಕಸಭಾ ಚುನಾವಣೆಯಂತೆ ಫಲಿತಾಂಶ ಪ್ರಕವಾಗಿ ಅಧಿಕಾರ ಉಳಿಸಿಕೊಳ್ಳುತ್ತಾ ಅಥವಾ ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ ಆಪ್ ಆಲೆಯಲ್ಲಿ ಕೊಚ್ಚಿಹೋಗುತ್ತಾ ಎನ್ನುವುದು ಮಧ್ಯಾಹ್ನದ ವೇಳೆ ಸಷ್ಟವಾಗಲಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 7 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿದ್ದರೆ, 2015ರ ವಿಧಾನಸಭಾ ಚುನಾವಣೆಯಲ್ಲಿ ಆಪ್ ಜಯಭೇರಿ ಬಾರಿಸಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದೆ. ಈ ಸಮೀಕ್ಷೆ ಫಲಿತಾಂಶವೇ ನಿಜವಾದಲ್ಲಿ ಮುಂದೆ ಇವಿಎಂ ವಿರುದ್ಧ ಭಾರೀ ಹೋರಾಟ ನಡೆಸುವುದಾಗಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಈಗಾಗಲೇ ಪ್ರಕಟಿಸಿದ್ದಾರೆ.

ಮೂರು ಪಾಲಿಕೆ: ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆಗಳಿದ್ದು, ಒಟ್ಟು 272 ವಾರ್ಡ್ ಗಳಿವೆ. 2012ರಲ್ಲಿ ಉತ್ತರ ದೆಹಲಿ ಮಹಾನಗರ ಪಾಲಿಕೆ, ದಕ್ಷಿಣ ಮಹಾನಗರ ಪಾಲಿಕೆ, ಪೂರ್ವ ದೆಹಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿದೆ. 2012ರ ಫಲಿತಾಂಶಲ್ಲಿ ಬಿಜೆಪಿ 138, ಕಾಂಗ್ರೆಸ್ 77, ಬಿಎಸ್‍ಪಿ 5ಸ್ಥಾನಗಳನ್ನು ಗೆದ್ದುಕೊಂಡಿತ್ತು.

2012ರ ಫಲಿತಾಂಶ:
ಉತ್ತರ ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 104 ಸ್ಥಾನಗಳಿದ್ದು, ಬಿಜೆಪಿ 59, ಕಾಂಗ್ರೆಸ್ 29, ಬಿಎಸ್‍ಪಿ 07, ಇತರೆ 09 ಸ್ಥಾನಗಳನ್ನು ಗೆದ್ದುಕೊಂಡಿತ್ತು. ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 104 ವಾರ್ಡ್ ಗಳಿದ್ದು, ಬಿಜೆಪಿ 44, ಕಾಂಗ್ರೆಸ್ 29, ಬಿಎಸ್‍ಪಿ 05, ಇತರೆ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಪೂರ್ವ ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 64 ವಾರ್ಡ್ ಗಳಿದ್ದು, ಬಿಜೆಪಿ 39, ಕಾಂಗ್ರೆಸ್ 19, ಬಿಎಸ್‍ಪಿ 03 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತೆ?
ಉತ್ತರ ದೆಹಲಿ ಮಹಾನಗರ ಪಾಲಿಕೆ – ಒಟ್ಟು ಸ್ಥಾನಗಳು 104
ಇಂಡಿಯಾ ಟುಡೇ-ಆಕ್ಸಿಸ್ ಬಿಜೆಪಿ 78-84 ಸ್ಥಾನ, ಆಪ್ 8-12, ಕಾಂಗ್ರೆಸ್ 8-12 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ. ಎಬಿಪಿ ನ್ಯೂಸ್-ಸಿ ವೋಟರ್ ಪ್ರಕಾರ ಬಿಜೆಪಿ 88, ಆಪ್ 06, ಕಾಂಗ್ರೆಸ್ 07 ಸ್ಥಾನಗಳನ್ನು ಗೆಲ್ಲಲಿದೆ.

ದಕ್ಷಿಣ ದೆಹಲಿ ಮಹಾನಗರ ಪಾಲಿಕೆ – ಒಟ್ಟು ಸ್ಥಾನಗಳು 104
ಇಂಡಿಯಾ ಟುಡೇ-ಆಕ್ಸಿಸ್ ಬಿಜೆಪಿ 79-85, ಆಪ್ 9-13 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 7-11 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ. ಎಬಿಪಿ ನ್ಯೂಸ್-ಸಿ ವೋಟರ್ ಬಿಜೆಪಿ 83, ಆಪ್ 09, ಕಾಂಗ್ರೆಸ್ 09 ವಾರ್ಡ್ ಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.

ಪೂರ್ವ ದೆಹಲಿ ಮಹಾನಗರ ಪಾಲಿಕೆ: 64
ಇಂಡಿಯಾ ಟುಡೇ-ಆಕ್ಸಿಸ್ ಬಿಜೆಪಿ 45-51, ಆಪ್ 6-10, ಕಾಂಗ್ರೆಸ್ 04-08 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ. ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಬಿಜೆಪಿ 47, ಆಪ್ 09, ಕಾಂಗ್ರೆಸ್ 06 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ

2015ರ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಆಮ್ ಆದ್ಮಿ ಪಾರ್ಟಿ 63, ಬಿಜೆಪಿ 03ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.

ಈಗ ಚುನಾವಣೆ ನಡೆದ್ರೆ ಎಷ್ಟು ಸ್ಥಾನ?
ಇಂಡಿಯಾ ಟುಡೇ-ಆಕ್ಸಿಸ್ ದೆಹಲಿ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಈಗ ಚುನಾವಣೆ ನಡೆದರೆ, ಬಿಜೆಪಿ 56-62, ಆಪ್ 6-7, ಕಾಂಗ್ರೆಸ್ 4-7 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ.

ಗಮನಿಸಬೇಕಾದ ವಿಚಾರಗಳು
– ಸರೈ ಪಿಪಾಲ್ ಥಲಾ ಮತ್ತು ಮೌಜ್‍ಪುರ್ ವಾರ್ಡ್‍ಗಳ ಅಭ್ಯರ್ಥಿಗಳು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ..
– ಪ್ರಸ್ತುತ ಪೂರ್ವ ದೆಹಲಿ ಮೇಯರ್ ಸತ್ಯ ಶರ್ಮಾ, ದಕ್ಷಿಣ ದೆಹಲಿ ಪಾಲಿಕೆ ಮೇಯರ್ ಶ್ಯಾಮ್ ಶರ್ಮಾ, ಉತ್ತರ ದೆಹಲಿ ಮಹಾನಗರ ಪಾಲಿಕೆ ಮೇಯರ್ ಡಾ ಸಂಜೀವ್ ನಯ್ಯಾರ್ ಇದ್ದಾರೆ.
– ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ-ಶಿರೋಮಣಿ ಅಕಾಲಿದಳದ ಮೈತ್ರಿ ಮಾಡಿಕೊಂಡಿದೆ.
– 267 ವಾರ್ಡ್‍ಗಳಲ್ಲಿ ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಯಾವ ಹಳೆಯ ಕಾರ್ಪೋರೇಟರ್‍ಗೂ ಟಿಕೆಟ್ ಕೊಟ್ಟಿಲ್ಲ.
– ಆಮ್ ಆದ್ಮಿ ಪಾರ್ಟಿ ಶಾಸಕ ವೇದ್ ಪ್ರಕಾಶ್ ಬಿಜೆಪಿಗೆ ಹಾರಿದ್ದರು. ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ, ಮಾಜಿ ಸಚಿವ ಅರವಿಂದರ್ ಸಿಂಗ್ ಲವ್ಲಿ ಕೂಡಾ ಬಿಜೆಪಿ ಸೇರಿದ್ದರು.
– ಇದೇ ತಿಂಗಳು ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ತನ್ನ ತೆಕ್ಕೆಯಲ್ಲಿದ್ದ ರಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರು ಸೋಲು ಅನುಭವಿಸಿತ್ತು.
–  2015ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಸರ್ಕಾರಕ್ಕೆ ಇದು ದೆಹಲಿ ಜನತೆ ನೀಡುತ್ತಿರುವ ಮಧ್ಯಂತರ ತೀರ್ಪು ಇದಾಗಲಿದೆ.

Click to comment

Leave a Reply

Your email address will not be published. Required fields are marked *