ರಾಜಸ್ಥಾನದಲ್ಲಿ ಮಾಯಾವತಿಗೆ ಶಾಕ್ – ಬಿಎಸ್‍ಪಿಯ ಎಲ್ಲ 6 ಶಾಸಕರು ಕಾಂಗ್ರೆಸ್ ಸೇರ್ಪಡೆ

Public TV
2 Min Read
BSP chief Mayawati

ಜೈಪುರ: ರಾಜಸ್ಥಾನದ ಎಲ್ಲ 6 ಶಾಸಕರು ಸೋಮವಾರ ತಡರಾತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ತೊರೆದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಬಿಎಸ್‍ಪಿಯ ರಾಜೇಂದ್ರ ಗುಡಾ, ಜೋಗೇಂದ್ರ ಸಿಂಗ್ ಅವನಾ, ವಾಜೀಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪ್‍ಚಂದ್ ಖೇರಿಯಾ ಅವರು ಕಾಂಗ್ರೆಸ್ ಸೇರಿದ್ದಾರೆ. ಈ ಮೂಲಕ 200 ಸ್ಥಾನಗಳ ಪೈಕಿ ಕಾಂಗ್ರೆಸ್ 106 ಸ್ಥಾನವನ್ನು ಪಡೆದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎರಡೇ ತಿಂಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.

ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಮಾಯಾವತಿ, ಕಾಂಗ್ರೆಸ್ ಯಾವಾಗಲೂ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿಯೇ ಅಂಬೇಡ್ಕರ್ ಅವರು ದೇಶದ ಮೊದಲ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅಲ್ಲದೆ, ಕಾಂಗ್ರೆಸ್‍ನವರು ಎಂದಿಗೂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಿಲ್ಲ. ಇದು ತೀವ್ರ ದುಃಖದ ಹಾಗೂ ಅವಮಾನಕರ ವಿಷಯವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಎಸ್‍ಪಿ ಶಾಸಕರ ನಡುವೆ ಒಡಕು ಮೂಡಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಲ್ಲದ, ಮೋಸಗಾರ ಪಕ್ಷ ಎಂದು ಸಾಬೀತುಪಡಿಸಿದೆ. ಕಾಂಗ್ರೆಸ್ ಕಠಿಣ ಪ್ರತಿಸ್ಪರ್ಧಿಗಳೊಂದಿಗೆ ಹೋರಾಡುವ ಬದಲು ಕಾಂಗ್ರೆಸ್‍ಗೆ ಬೆಂಬಲ ನೀಡುವ ಪಕ್ಷಗಳಿಗೆ ಯಾವಾಗಲೂ ಹಾನಿಯುಂಟು ಮಾಡುತ್ತಿದೆ ಎಂದು ಟ್ವೀಟ್‍ನಲ್ಲಿ ಗುಡುಗಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಸಂಪರ್ಕದಲ್ಲಿದ್ದ ಶಾಸಕರು ವಿಧಾನಸಭೆ ಸ್ಪೀಕರ್ ಸಿ.ಪಿ.ಜೋಶಿಯವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಕುರಿತ ನಿರ್ಧಾರದ ಬಗ್ಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಕೋಮು ಶಕ್ತಿಗಳ ವಿರುದ್ಧ ಹೋರಾಡಲು, ರಾಜ್ಯದ ಅಭಿವೃದ್ಧಿ ಹಾಗೂ ಸರ್ಕಾರದ ಸ್ಥಿರತೆಗಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಅಶೋಕ್ ಗೆಹ್ಲೋಟ್ ಅವರು ಅತ್ಯುತ್ತಮ ಮುಖ್ಯಮಂತ್ರಿಯಾಗಿದ್ದು, ರಾಜಸ್ಥಾನದಲ್ಲಿ ಅವರಿಗಿಂತ ಉತ್ತಮರು ಯಾರೂ ಇಲ್ಲ. ಹೀಗಾಗಿ ಅವರ ಬಗ್ಗೆ ಪ್ರಭಾವಿತನಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಶಾಸಕ ರಾಜೇಂದ್ರ ಗುಡಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶಾಸಕ ಜೋಗೇಂದ್ರ ಸಿಂಗ್ ಅವನಾ ಈ ಕುರಿತು ಪ್ರತಿಕ್ರಿಯಿಸಿ, ನಾವು ನಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದೇವೆ. ಇಂದು ಸಿ.ಪಿ.ಜೋಶಿ ಹಾಗೂ ಅಶೋಕ್ ಅವರನ್ನು ಭೇಟಿಯಾಗಿದ್ದೇವೆ. ನಮ್ಮ ಮುಂದೆ ಹಲವು ಸವಾಲುಗಳಿದ್ದವು. ಒಂದೆಡೆ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುತ್ತಿದ್ದೆವು. ಇನ್ನೊಂದೆಡೆ ಚುನಾವಣೆಯಲ್ಲಿ ಅವರ ವಿರುದ್ಧ ಹೋರಾಡುತ್ತಿದ್ದೆವು. ಹೀಗಾಗಿ ಯೋಚಿಸಿಯೇ ರಾಜ್ಯದ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ರಾಜಸ್ಥಾನ ಚುನಾವಣೆಯಲ್ಲಿ ಒಟ್ಟು 200 ಕ್ಷೇತ್ರಗಳ ಪೈಕಿ 100ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ ಬಿಜೆಪಿ 72 ಸ್ಥಾನಗಳನ್ನು ಗೆದ್ದುಕೊಂಡಿತ್ತು. 12 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದರೆ 6 ಕ್ಷೇತ್ರಗಳಲ್ಲಿ ಬಿಎಸ್‍ಪಿ ಜಯಗಳಿಸಿತ್ತು. 2019ರ ಮಾರ್ಚ್ ನಲ್ಲಿ 12 ಮಂದಿ ಇತರ ಶಾಸಕರು ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲ ಕಾಂಗ್ರೆಸ್ ಸಂಖ್ಯೆ 112ಕ್ಕೆ ಏರಿಕೆ ಆಗಿತ್ತು. ಈಗ ಬಿಎಸ್‍ಪಿ ಶಾಸಕರ ಸೇರ್ಪಡೆಯಿಂದ ಸಂಖ್ಯೆ 118ಕ್ಕೆ ಏರಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *