ನವದೆಹಲಿ: ಸಾರ್ವಜನಿಕ ಹಣದಲ್ಲಿ ಉತ್ತರ ಪ್ರದೇಶದ ಲಕ್ನೋ ಹಾಗೂ ನೊಯ್ಡಾದಲ್ಲಿ ಆನೆ ಪ್ರತಿಮೆಗಳನ್ನು ನಿರ್ಮಿಸಿದ್ದಕ್ಕೆ ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ನಾಯಕಿ ಮಾಯಾವತಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಮೇಲ್ನೋಟಕ್ಕೆ ಮಾಯಾವತಿ ಸರ್ಕಾರಿ ದುಡ್ಡಿನಲ್ಲಿ ಪ್ರತಿಮೆಗಳನ್ನು ನಿರ್ಮಾಣ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ. ಹೀಗಾಗಿ ಇದಕ್ಕೆ ತಗುಲಿದ ವೆಚ್ಚವನ್ನು ಮಾಯಾವತಿ ಪಾವತಿಸಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಖಾರವಾಗಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಖಜಾನೆ ಹಣದಿಂದ ಪಕ್ಷದ ಚಿಹ್ನೆ, ಮಾಯಾವತಿ ಹಾಗೂ ಬಿಎಸ್‍ಪಿ ಸಂಸ್ಥಾಪಕ ಪಕ್ಷ ಸಂಸ್ಥಾಪಕ ಕಾನ್ಶಿ ರಾಮ್ ಪ್ರತಿಮೆ ನಿರ್ಮಾಣ ಮಾಡಿದ್ದು ಸರಿಯಲ್ಲ. ಪ್ರತಿಮ ನಿರ್ಮಾಣ ಮಾಡಬೇಕಿದ್ದಲ್ಲಿ ನಿಮ್ಮ ವೈಯ್ತಕಿಕ ಹಣವನ್ನು ಬಳಸಿ ಎಂದು ಕೋರ್ಟ್ ಅಭಿಪ್ರಾಯಪಟ್ಟು ಚಾಟಿ ಬೀಸಿದೆ.
ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠ ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಎಪ್ರಿಲ್ 2ರಂದು ನಡೆಸಲಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಎಸ್‍ಪಿ ನಾಯಕಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಜಂಟಿಯಾಗಿ ಉತ್ತರಪ್ರದೇಶದಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಭೀತಿಯಲ್ಲಿ ಮುಂದಿನ ವಿಚಾರಣೆ ಮೇ ತಿಂಗಳಿನಲ್ಲಿ ಅಥವಾ ಲೋಕಸಭಾ ಚುನಾವಣೆಯ ನಂತರ ನಡೆಸಬಹುದೇ ಎಂದು ಬಿಎಸ್‍ಪಿ ನ್ಯಾಯಾಲಯದಲ್ಲಿ ಮನವಿ ಮಾಡಿತು.
ಈ ಮನವಿಗೆ ಮುಖ್ಯ ನ್ಯಾಯಮೂರ್ತಿಗಳು, ನಮಗೆ ಯಾವುದು ಇಷ್ಟವಾಗುದಿಲ್ಲವೋ ಆ ವಿಚಾರವನ್ನು ಹೇಳಲು ಬರಬೇಡಿ ಎಂದು ಖಡಕ್ ಆಗಿ ಹೇಳಿದರು.
ಏನಿದು ಪ್ರಕರಣ?:
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ಕೋಟ್ಯಂತರ ಹಣ ವೆಚ್ಚ ಮಾಡಿ ದಲಿತ್ ಪವರ್ ಹೌಸ್, ಬಿಎಸ್‍ಪಿ ಚಿಹ್ನೆ ಆನೆ ಹಾಗೂ ಪಕ್ಷ ಸಂಸ್ಥಾಪಕ ಕಾನ್ಶಿ ರಾಮ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಬಡವರ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿ ವಕೀಲರಾದ ರವಿಕಾಂತ್ ಹಾಗೂ ಸುಕುಮಾರ್ ಅವರು 2019ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.
2012ರ ಉತ್ತರ ವಿಧಾನಸಭಾ ಚುನಾವಣೆ ವೇಳೆ ಮಾಯಾವತಿ ಹಾಗೂ ಆನೆಯ ಪ್ರತಿಮೆಗಳಿಗೆ ಹೊದಿಕೆ ಹೊದಿಸಬೇಕು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. 2014ರಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದಾಗ, ಪ್ರತಿಮೆ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುಮತಿ ಸಿಕ್ಕಿತ್ತು. ಹೀಗಾಗಿ ನಿರ್ಮಾಣ ಮಾಡಿದ್ದೇವೆ ಎಂದು ಬಿಎಸ್‍ಪಿ ತಿಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv