ಬೆಂಗಳೂರು: ಶಾಸಕ ಎನ್.ಮಹೇಶ್ ವಿಶ್ವಾಸಮತಯಾಚನೆ ಕಲಾಪಕ್ಕೆ ಗೈರಾದ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಮುಖ್ಯಸ್ಥೆ ಮಾಯಾವತಿ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ, ಕರ್ನಾಟಕದ ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ನಮ್ಮ ಶಾಸಕರಾದ ಎನ್.ಮಹೇಶ್ ಅವರಿಗೆ ಸೂಚನೆ ನೀಡಲಾಗಿತ್ತು. ಪಕ್ಷದ ಆದೇಶವನ್ನು ಉಲ್ಲಂಘಿಸಿದ ಎನ್.ಮಹೇಶ್ ಕಲಾಪಕ್ಕೆ ಗೈರಾಗುವ ಮೂಲಕ ಅಶಿಸ್ತು ತೋರಿಸಿದ್ದಾರೆ. ಹೈಕಮಾಂಡ್ ನಿರ್ಣಯದ ವಿರುದ್ಧ ನಡೆದುಕೊಂಡ ಹಿನ್ನೆಲೆಯಲ್ಲಿ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜುಲೈ 21ರಂದು ಟ್ವೀಟ್ ಮಾಡಿದ್ದ ಮಾಯಾವತಿ ಅವರು, ವಿಶ್ವಾಸ ಮತಯಾಚನೆ ವೇಳೆ ಮೈತ್ರಿ ಸರ್ಕಾರದ ಪರವಾಗಿ ಮತ ಹಾಕಿ ಎಂದು ಎನ್.ಮಹೇಶ್ ಅವರಿಗೆ ನಿರ್ದೇಶನ ನೀಡಿದ್ದರು. ಮಾಯಾವತಿ ಅವರ ಟ್ವೀಟ್‍ಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಶಾಸಕ ಎನ್.ಮಹೇಶ್ ಅವರು, ಮೈತ್ರಿ ಸರ್ಕಾರವು ಸೋಮವಾರ ವಿಶ್ವಾಸ ಮತಯಾಚಿಸುತ್ತಿದೆ. ಈ ಕುರಿತು ಚರ್ಚೆಗಳೆಲ್ಲ ಮುಗಿದ ನಂತರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಮತ ವಿಭಜನೆಗೆ ಹಾಕಿದಾಗ ನಾನು ಕಲಾಪಕ್ಕೆ ಗೈರು ಹಾಜರಾಗುತ್ತೇನೆ ಎಂದು ತಿಳಿಸಿದ್ದರು.