Connect with us

Cricket

ಕೊಹ್ಲಿಗೆ ವಿಶ್ರಾಂತಿ ನೀಡಿ ಮಯಾಂಕ್‍ಗೆ ಸ್ಥಾನ ನೀಡಿ

Published

on

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಆ.12 ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದು ಮಯಾಂಕ್ ಅಗರ್ವಾಲ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಹೇಳಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡ ಭರ್ಜರಿ ಜಯ ಪಡೆದಿರುವುದರಿಂದ ಆಡುವ 11ರ ಬಳಗದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬಹುದು. ಇದೇ ವೇಳೆ ಮುಂದಿನ ಆಸೀಸ್ ಟೂರ್ನಿಗೂ ಮುನ್ನ ಮಯಾಂಕ್ ತನ್ನ ಸಾಮರ್ಥ್ಯ ಸಾಬೀತು ಪಡಿಸಲು 2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮುರಳಿ ಕಾರ್ತಿಕ್, ವಿರಾಟ್ ಚಾಂಪಿಯನ್ ಪ್ಲೇಯರ್. ಆದರೆ ಈ ಸರಣಿಯನ್ನು ವಿರಾಟ್ ಕೊಹ್ಲಿ ಇಲ್ಲದೆಯೂ ಗೆಲುವು ಪಡೆಯಬಹುದು ಎಂದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ. ಅಲ್ಲದೇ ಏಷ್ಯಾ ಕಪ್ ಟೂರ್ನಿಯ ವೇಳೆಯೂ ವಿಶ್ರಾಂತಿ ನೀಡಲಾಗಿತ್ತು ಎಂದು ತಿಳಿಸಿದರು.

ಕಾರ್ತಿಕ್ ತಮ್ಮ ಹೇಳಿಕೆಗೆ ಸಮರ್ಥನೆ ಕೂಡ ನೀಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಪೂಜಾರ, ಇಶಾಂತ್ ಶರ್ಮಾ ರಂತಹ ಆಟಗಾರರನ್ನು ಡ್ರಾಪ್ ಮಾಡಲು ಕಷ್ಟವಾಗುತ್ತದೆ. ಆದರೆ ನಾಯಕನಾಗಿ ಆಸೀಸ್ ಟೂರ್ನಿಗೆ ಉತ್ತಮ ತಂಡದೊಂದಿಗೆ ಪ್ರವಾಸ ಮಾಡಲು ಇದು ಸೂಕ್ತ ಆಯ್ಕೆ ಆಗಿದೆ. ಒಂದೊಮ್ಮೆ ಆಯ್ಕೆ ಸಮಿತಿ ಆಸೀಸ್ ಟೂರ್ನಿಗೆ ಮಾಯಾಂಕ್‍ರನ್ನ ಆಯ್ಕೆ ಮಾಡಬೇಕಾದರೆ ಇಲ್ಲಿ ಅವಕಾಶ ನೀಡಲೇಬೇಕು ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕನ್ನಡಿಗ ಮಾಯಾಂಕ್ ಅಗರ್ವಾಲ್ ಪರ ಹರ್ಭಜನ್ ಬೌಲಿಂಗ್!

ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಸ್ಥಾನದಲ್ಲಿ ಕನ್ನಡಿಗ ಮಾಯಾಂಕ್ ರನ್ನು ವಿಂಡೀಸ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಅಲ್ಲದೇ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಮಾಯಾಂಕ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ನೀಡದೇ ಆಯ್ಕೆ ಸಮಿತಿ ನಿರ್ಲಕ್ಷ್ಯ ಮಾಡಿತ್ತು.

ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ಆ.12 ರಿಂದ ಹೈದರಾಬಾದ್ ನಲ್ಲಿ ಆರಂಭವಾಗಲಿದೆ. ಉಳಿದಂತೆ ಮುಂದಿನ ಸಿಮೀತ ಓವರ್ ಗಳ ಏಕದಿನ ಮತ್ತು ಟಿ20 ಸರಣಿಗೆ ವೆಸ್ಟ್ ಇಂಡೀಸ್ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಬ್ರಾವೋ, ಪೋಲಾರ್ಡ್ ಕಾಮ್ ಬ್ಯಾಕ್ ಮಾಡಿದ್ದಾರೆ. ಆದರೆ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ದೂರ ಸರಿದಿದ್ದಾರೆ. ಇದನ್ನು ಓದಿ: ಭಾರತ, ಶ್ರೀಲಂಕಾ ಟಿ-20ಯಲ್ಲಿ ಟಾಸ್ ಗೆದ್ದವರು ಯಾರು: ಈ ವಿಡಿಯೋ ನೋಡಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *