– ದೂರು ದಾಖಲಿಸಿಕೊಂಡ ಪೊಲೀಸರು ಆಶ್ಚರ್ಯ
– ಉಚಿತ ಸಲಹೆ ಪಡೆದು ಮೋಸಕ್ಕೊಳಗಾದ ಯುವತಿ
ಹೈದರಾಬಾದ್: ವಿವಾಹ ಜಾಲತಾಣಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವಕ, ಯುವತಿಯರಿಂದ ಹಣ ದೋಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಹೈದರಾಬಾದ್ ನಗರದಲ್ಲಿ ವಿಶೇಷ ಸೈಬರ್ ಕ್ರೈಂ ಪ್ರಕರಣ ದಾಖಲಾಗಿದ್ದು, ಮದುವೆಯಾಗುತ್ತಿಲ್ಲ ಎಂದು ಗೂಗಲ್ ಸರ್ಚ್ ಮಾಡಿದ್ದ ಯುವತಿಯನ್ನು ಟ್ರಾಪ್ ಮಾಡಿ 5 ಲಕ್ಷ ರೂ. ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್‍ನ ಸಿಟಿ ಸೈಬರ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಯುವತಿ ತನ್ನ ಬಳಿ 5 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಆದರೆ ಯುವತಿ ಮೋಸ ಹೋದ ಬಗ್ಗೆ ಮಾಹಿತಿ ಪಡೆದ ಪೊಲೀಸರಿಗೆ ಮಾತ್ರ ಕ್ಷಣ ಕಾಲ ಶಾಕ್ ಆಗಿದೆ.
Advertisement
Advertisement
ನಡೆದಿದ್ದೇನು?
ನಗರದ ಯುವತಿ ತನಗೆ ಮದುವೆಯಾಗುತ್ತಿಲ್ಲ ಎಂದು ತನ್ನ ಆಪ್ತ ಸಂಬಂಧಿಗಳ ಬಳಿ ಹೇಳಿಕೊಂಡಿದ್ದಳು. ಆ ವೇಳೆ ಸಂಬಂಧಿಯೊಬ್ಬರು ನಿನ್ನ ಮೇಲೆ ವಾಮಾಚಾರ ಪ್ರಯೋಗ ಆಗಿರಬಹುದು. ಆದನ್ನು ಬಿಡಿಸಿಕೊಳ್ಳದ ಹೊರತು ಮದುವೆಯಾಗುವುದಿಲ್ಲ ಎಂಬ ಉಚಿತ ಸಲಹೆ ನೀಡಿದ್ದರು.
Advertisement
ಆಪ್ತರ ಸಲಹೆ ಕೇಳಿ ಶಾಕ್ ಆದ ಯುವತಿ, ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಗೂಗಲ್ ಸಹಾಯ ಪಡೆದಿದ್ದದಳು. ವಾಮಾಚಾರವನ್ನು ತೆಗೆದು ಹಾಕುವ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಿದ್ದ ವೇಳೆ ಯುವತಿಗೆ ಫೋನ್ ನಂಬರ್ ಹಾಗೂ ವಿಳಾಸದ ಮಾಹಿತಿ ಲಭಿಸಿತ್ತು. ಆ ನಂಬರ್ ಗೆ ಕರೆ ಮಾಡಿದ್ದ ಯುವತಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಳು. ಯುವತಿ ಮಾತು ಕೇಳಿದ ವ್ಯಕ್ತಿ ಆಕೆಯ ಭವಿಷ್ಯ, ಜೀವನದ ಬಗ್ಗೆ ಮೋಡಿ ಮಾಡುವ ಮಾತು ಹೇಳಿ, ನಿಮ್ಮ ಕುಟುಂಬದಲ್ಲಿ ಒಬ್ಬರಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸಿಕೊಳ್ಳದ ಹೊರತು ಮದುವೆಯಾಗುವುದಿಲ್ಲ ಎಂದು ಹೇಳಿ ಭಯ ಹುಟ್ಟಿಸಿದ್ದ.
Advertisement
ಯುವತಿ ತಮ್ಮ ಮಾತು ನಂಬಿರುವುದನ್ನು ಖಚಿತ ಪಡಿಸಿಕೊಂಡ ಆತ ತನ್ನ ಪ್ಲಾನ್‍ನಂತೆ ಮುಂದುವರಿದಿದ್ದ. ದೆವ್ವ ಬಿಡಿಸಲು ಪ್ರತ್ಯೇಕ ಪೂಜೆಯ ಅಗತ್ಯವಿದೆ ಎಂದು ಹೇಳಿ ಹಣ ನೀಡುವಂತೆ ತನ್ನ ಬ್ಯಾಂಕ್ ಖಾತೆ ಮಾಹಿತಿ ನೀಡಿದ್ದ. ವ್ಯಕ್ತಿಯ ಮಾತು ನಂಬಿದ್ದ ಯುವತಿ ಒಮ್ಮೆ ಬ್ಯಾಂಕ್ ಹಾಗೂ 5 ಬಾರಿ ಯುಪಿಐ ನಲ್ಲಿ 5 ಲಕ್ಷ ರೂ.ಗಳನ್ನು ಕಳುಹಿಸಿದ್ದಳು. ಹಣ ನೀಡಿ ಪೂಜೆ ಮಾಡಿಸಿದರೂ ಯಾವುದೇ ಉಪಯೋಗವಾದ ಕಾರಣ ಮತ್ತೆ ವ್ಯಕ್ತಿಗೆ ಕರೆ ಮಾಡಿ ಪ್ರಶ್ನಿಸಿದ್ದ ಯುವತಿಗೆ ಆತ ಮತ್ತಷ್ಟು ಹಣ ನೀಡುವಂತೆ ಹೇಳಿದ್ದ. ಇದರಿಂದ ತಾನು ಮೋಸ ಹೋಗಿರುವುದನ್ನು ತಿಳಿದ ಯುವತಿ ಮಂಗಳವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಯುವತಿ ನೀಡಿದ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಬ್ಯಾಂಕ್ ಖಾತೆ ಪಂಜಾಬ್‍ನ ಹೋಶಿಯಾರ್‍ಪುರ್‍ಗೆ ಸೇರಿದ್ದು ಎಂಬುದನ್ನು ಪತ್ತೆ ಮಾಡಿದ್ದಾರೆ. ಸದ್ಯ ಯುಪಿಎ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.