ವೃಂದಾವನ ದೇವಸ್ಥಾನದಲ್ಲಿ ನೃತ್ಯ ಮಾಡಿದ ಸಂಸದೆ ಹೇಮಾ ಮಾಲಿನಿ: ವಿಡಿಯೋ

Public TV
1 Min Read
Hema Malini

ಲಕ್ನೋ: ಬಿಜೆಪಿ ಸಂಸದೆ, ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶ ಪ್ರಸಿದ್ಧ ಶ್ರೀ ರಾಧಾ ರಮಣ ದೇವಸ್ಥಾನದಲ್ಲಿ ನೃತ್ಯ ಮಾಡಿದ್ದಾರೆ.

ಹರಿಯಾಲಿ ತೀಜ್ (ಹಸಿರು ಹಬ್ಬದ) ನಿಮಿತ್ತ ಮಥುರಾ ಜಿಲ್ಲೆಯ ವೃಂದಾವನದ ಶ್ರೀ ರಾಧಾ ರಮಣ ದೇವಸ್ಥಾನದಲ್ಲಿ ಶನಿವಾರ ನೃತ್ಯ ಕಾರ್ಯಕ್ರಮ ನಡೆಯಿತು. ಈ ವೇಳೆ ಮಥುರಾದ ಸಂಸದೆ ಹೇಮಾ ಮಾಲಿನಿ ಅವರು ಹಸಿರು ಹಾಗೂ ಕೆಂಪು ಲೆಹಂಗಾ, ಚಿನ್ನಾಭರಣ, ಬಳೆಗಳನ್ನು ಧರಿಸಿ ದೇಗುಲದ ಪ್ರಾಂಗಣದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇಳಿವಯಸ್ಸಿನಲ್ಲೂ ಹೇಮಾ ಮಾಲಿನಿ ಅವರು ಭರತನಾಟ್ಯ ಪ್ರದರ್ಶನ ನೀಡಿದ್ದನ್ನು ನೋಡಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ಸಂಸದೆ, ಹರಿಯಾಲಿ ತೀಜ್ ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು ಖುಷಿ ತಂದಿದೆ. ನಾನು ನೀಡಿದ ಮೊದಲ ಪ್ರದರ್ಶನದಲ್ಲಿ ಕೃಷ್ಣನನ್ನು ಭೇಟಿಯಾಗಲು ರಾಧೆ ವ್ಯಕ್ತಪಡಿಸುವ ಭಾವನೆಗಳನ್ನು ತಿಳಿಸಿದ್ದೇನೆ. ಎರಡನೇ ಪ್ರದರ್ಶನದಲ್ಲಿ ನಾನು ಯಾವಾಗಲೂ ನಿನ್ನ ಭಕ್ತಳಾಗಿ ಇರುವಂತೆ ನೋಡಿಕೋ ಎಂದು ಮೀರಾ ಕೃಷ್ಣನನ್ನು ಬೇಡಿಕೊಳ್ಳುವ ಭಾವನೆಯನ್ನು ನೃತ್ಯದ ಮೂಲಕ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.

ಹೇಮಾ ಮಾಲಿನಿ ಅವರ ನೃತ್ಯ ಪ್ರದರ್ಶನ ಅದ್ಭುತವಾಗಿತ್ತು. ಅವರು ಇಲ್ಲಿಗೆ ಬಂದು ನೃತ್ಯ ಪ್ರದರ್ಶನ ನೀಡಿದ್ದು ನಮಗೆ ದೊಡ್ಡ ವಿಚಾರ ಎಂದು ಕಾರ್ಯಕ್ರಮದಲ್ಲಿ ಭಾಗವಿಸಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹರಿಯಾಲಿ ತೀಜ್ ವಿಶೇಷವಾಗಿ ಪಾರ್ವತಿಗೆ ಸಮರ್ಪಿತವಾದ ಹಬ್ಬವಾಗಿದೆ. ಪಾರ್ವತಿಯು ಸುದೀರ್ಘ ಕಾಲದ ಬಳಿಕ ಶಿವನೊಂದಿಗೆ ಒಂದಾದ ದಿನ ಇದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಹೀಗಾಗಿ ಆ ದಿನವನ್ನು ಸ್ಮರಿಸುವುದಕ್ಕಾಗಿ ಉತ್ತರ ಭಾರತದಲ್ಲಿ ಹರಿಯಾಲಿ ತೀಜ್ ಹಬ್ಬ ಆಚರಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *