ಬಾಗಲಕೋಟೆ: ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಮಠದ 8 ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಕೇಶ ಮುಂಡನ ಮಾಡುತ್ತಿರುವುದು ಮೂರ್ಖತನ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಪ್ರಕಟಣೆ ಹೊರಡಿಸಿರುವ ಮಾತೆ ಮಹಾದೇವಿ ಅವರು, ಲಿಂಗಾಯತ ಧರ್ಮದ ಪ್ರಕಾರ ಯಾರಾದರೂ ಲಿಂಗೈಕ್ಯರಾದರೆ ತಲೆ ಬೊಳಿಸಿಕೊಳ್ಳುವ ಸಂಪ್ರದಾಯವಿಲ್ಲ. ಹೀಗಾಗಿ ಇಂತಹ ಮೂಢ ನಂಬಿಕೆಯನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮಾಡಬಾರದು. ಬಸವ ತತ್ವ ಎಂದು ಹೇಳುತ್ತ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತ ಹೋದರೆ ಹಿರಿಯರಿಗೆ ಮಾಡಿದ ಅಪಚಾರವಾಗುವುದು ಎಂದು ಹೇಳಿದ್ದಾರೆ.
ಮಹಾನ್ ಸಂತರಾದ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ಸಂಸ್ಮರಣೆ ಸಮಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ದಾಸೋಹ ಮಾಡಿ. ಆದರೆ ಮೌಢ್ಯಾಚರಣೆ, ಮನುವಾದ ಹಾಗೂ ವೈದಿಕ ಧರ್ಮಕ್ಕೆ ಸಂಬಂಧಿಸಿದ ತಲೆ ಬೆಳಿಸಿಕೊಳ್ಳುವ ಸಂಪ್ರದಾಯ ಸರಿಯಲ್ಲ. ವಿದ್ಯಾರ್ಥಿಗಳು ಮಠದ ಕೈಯಲ್ಲಿ ಇರುತ್ತಾರೆ. ನಾವು ಹೇಳಿದ ಹಾಗೆ ಕೇಳುತ್ತಾರೆ ಅಂತ ಸಾಮೂಹಿಕ ಕೇಶ ಮುಂಡನಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಶಿವಕುಮಾರ ಶ್ರೀಗಳು ಅನೇಕ ವರ್ಷಗಳಿಂದ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದರು. ಕಿರಿಯ ಶ್ರೀಗಳು ಮಠದ ಎಲ್ಲ ಕಾರ್ಯವನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಿಗೆ ಅನಾಥ ಭಾವ ಬೆಳೆಯಲು ಅವಕಾಶವೇ ಇಲ್ಲ. ಆದ್ದರಿಂದ ಈ ಆಚರಣೆಯನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮಾಡಕೂಡದು. ಮೂಢನಂಬಿಕೆಯಿಂದ ಹೊರಬರಬೇಕು. ಮಠಗಳ ಮೂಲಕ ಮೌಢ್ಯತೆ ಬಿತ್ತುವುದು ಲಿಂಗಾಯತ ಧರ್ಮಕ್ಕೆ ಮಾಡುವ ಅಪಚಾರ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿ, ಪ್ರೀತಿಯಿಂದ ನೋಡಿ, ದಾಸೋಹ ಮಾಡಿ ಇಂತಹ ಮೂಢಾಚರಣೆಯನ್ನು ಮಾಡಬಾರದು ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv