Connect with us

Districts

ಉಡುಪಿ: 32 ಅಡಿ ಎತ್ತರದ ಮಧ್ವ ಮೂರ್ತಿಗೆ ಹಾಲು, ಅರಶಿಣ, ಗಂಧದ ಮಸ್ತಕಾಭಿಷೇಕ

Published

on

ಉಡುಪಿ: ದೇವಾಲಯಗಳ ನಗರಿ ಉಡುಪಿ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಗೊಮ್ಮಟೇಶ್ವರ ಮೂರ್ತಿಗೆ ಈವರೆಗೆ ಮಸ್ತಕಾಭಿಷೇಕ ನಡೆಯುವ ಸಂಪ್ರದಾಯವಿತ್ತು. ಹೊಸದಾಗಿ ಕೆತ್ತಲಾದ ಮಧ್ವಾಚಾರ್ಯರ 32 ಅಡಿ ಎತ್ತರದ ವಿಗ್ರಹಕ್ಕೆ ಮೊತ್ತ ಮೊದಲ ಬಾರಿಗೆ ಅಭಿಷೇಕ ಮಾಡಲಾಯ್ತು.

ಉಡುಪಿ ಜಿಲ್ಲೆಯ ಕುಂಜಾರುಗಿರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಮಧ್ವಮೂರ್ತಿಯ ಬ್ರಹ್ಮಕಲಶಾಭಿಷೇಕ ನಡೆಯಿತು. ಮೂರು ದಿನಗಳ ಕಾಲ ನಡೆದ ವೈಭವದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಮಧ್ವಾಚಾರ್ಯರ ಏಕಶಿಲಾ ವಿಗ್ರಹಕ್ಕೆ ಹಲವು ದ್ರವ್ಯಗಳಿಂದ ಅಭಿಷೇಕ ಮಾಡಲಾಯ್ತು.

ಕುಂಜಾರುಗಿರಿ ದ್ವೈತ ಮತದ ಸಂಸ್ಥಾಪಕ ಮಧ್ವಾಚಾರ್ಯರ ಜನ್ಮಸ್ಥಳ. ಹೀಗಾಗಿ ಇಲ್ಲೊಂದು ಸುಂದರ ಮೂರ್ತಿ ಸ್ಥಾಪನೆಯಾಗಬೇಕು ಎಂಬುದು ಪಲಿಮಾರು ಸ್ವಾಮೀಜಿಗಳ ಇಚ್ಛೆಯಾಗಿತ್ತು. ಸುಮಾರು ಮೂರು ವರ್ಷಗಳ ಕಾಲ ಈ ಮೂರ್ತಿಯನ್ನು ಕುಂಜಾರಿನಲ್ಲಿ ಕೆತ್ತಲಾಗಿತ್ತು. ಇದೀಗ ನೂರಾರು ಮಂದಿ ವೈದಿಕರ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಿಸಲಾಯ್ತು. ಮುಂದಿನ ದಿನಗಳಲ್ಲಿ ಕುಂಜಾರು ಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣವಾಗುವ ನಿರೀಕ್ಷೆಯಿದೆ.

ಹನುಮದೇವರ ಅವತಾರ ಭೀಮಸೇನ. ಭೀಮ ದೇವರ ಅವತಾರ ಮಧ್ವಾಚಾರ್ಯರು. 700ನೇ ವರ್ಷದ ಆಚರಣೆ ಉಡುಪಿಯಲ್ಲಿ ನಡೆಯುತ್ತಿದೆ. ಇದೇ ಮೊದಲು 32 ಅಡಿ ಎತ್ತರದ ದೇವರ ವಿಗ್ರಹ ಪ್ರತಿಷ್ಟಾಪನೆ ನಡೆಸಲಾಗಿದೆ. ಮಧ್ವಾಚಾರ್ಯರ ಬಾಲಲೀಲೆ ಇದ್ದ ಜಾಗದಲ್ಲೇ ಈ ಪುತ್ಥಳಿ ಸ್ಥಾಪನೆ ಮಾಡಲಾಗಿದೆ. ಯಾವ ನಿರ್ಬಂಧ ಇಲ್ಲದೆ, ಬೆಟ್ಟದ ಬುಡದಲ್ಲಿ ಕುಳಿತು ಮಧ್ವಾಚಾರ್ಯರ ಪದತಲದಲ್ಲಿ ಕುಳಿತು ಧ್ಯಾನ ಮಾಡಬಹುದು. ಭಜನೆ, ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥಶ್ರೀಪಾದರು ಪಬ್ಲಿಕ್ ಟಿವಿಗೆ ಹೇಳಿದರು.

ಮಧ್ವಾಚಾರ್ಯರು ಜನ್ಮ ಹೊಂದಿದ ಸ್ಥಳ ಇದು. ತಾಯಿ ದುರ್ಗೆಯ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರು ಬರುತ್ತಿದ್ದರು. ಇದು ಮಧ್ವಾಚಾರ್ಯರ ಭಕ್ತರಿಗೆ ಸಂತಸದ ಸುದಿನ. ವಿಶ್ವದಲ್ಲೇ ಅತೀ ಎತ್ತರದ ಮಧ್ವರ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಪಾಜಕ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಧಾರ್ಮಿಕ ಪ್ರವಾಸಿತಾಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಇಷ್ಟುದಿನಗಳ ಕಾಲ ಉಡುಪಿಗೆ ಬರುವ ಭಕ್ತರು ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನ, ಪರಶುರಾಮ ಬೆಟ್ಟಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದರು. ಮುಂದೆ ಮಧ್ವಮೂರ್ತಿಯ ಕೆಳಭಾಗದಲ್ಲಿ ಧ್ಯಾನ ಮಾಡುವ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಪಲಿಮಾರು ಮಠ ಹೇಳಿದೆ.

Click to comment

Leave a Reply

Your email address will not be published. Required fields are marked *