ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ

Public TV
2 Min Read
ind w vs sa w india seal series 3 0 against south africa smriti mandhana breaks record for most runs by indian woman in bilateral odi series

ಬೆಂಗಳೂರು: ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ (Team India) ಉಪನಾಯಕಿ ಸ್ಮೃತಿ ಮಂದಾನ (Smriti Mandhana) ಅವರ ಬ್ಯಾಟಿಂಗ್ ಹಾಗೂ ಬೌಲರ್‌ಗಳು ಸಂಘಟಿತ ಪ್ರದರ್ಶನದ ಬಲದಿಂದ ಹರ್ಮನ್‍ಪ್ರೀತ್ ಕೌರ್ ಬಳಗ, ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಪ್ರವಾಸಿ ತಂಡ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಇನ್ನೂ 9.2 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತು.

ind w vs sa w india seal series 3 0 against south africa smriti mandhana breaks record for most runs by indian woman in bilateral odi series 1

ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ನಾಯಕಿ ಲೌರಾ ವೋಲ್ವಾರ್ಟ್ (61 ರನ್) ಹಾಗೂ ತಝಿನ್ ಬ್ರಿಟ್ಸ್ (38 ರನ್) ಮೊದಲ ವಿಕೆಟ್‍ಗೆ 102 ರನ್‍ಗಳ ಅಮೋಘ ಜೊತೆಯಾಟವಾಡಿದರು. ಕೇವಲ 2 ರನ್ ಅಂತರದಲ್ಲಿ ಇಬ್ಬರೂ ಔಟಾದದ್ದು, ಆತಿಥೇಯರು ಮೇಲುಗೈ ಸಾಧಿಸಲು ನೆರವಾಯಿತು.

ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕನ್ನಡತಿ ಶ್ರೇಯಾಂಕಾ ಪಾಟೀಲ್, 10 ಓವರ್‍ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದರು. ಅರುಂದತಿ ರೆಡ್ಡಿ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಉರುಳಿಸಿದರು. ಪೂಜಾ ವಸ್ತ್ರಾಕರ್ ಒಂದು ವಿಕೆಟ್ ಕಿತ್ತರು.

ಪಂದ್ಯದಲ್ಲಿ 83 ಎಸೆತಗಳಲ್ಲಿ 11 ಬೌಂಡರಿ ಸಿಡಿಸಿ 90 ರನ್ ಗಳಿಸಿ ಸ್ಮೃತಿ ಮಂದಾನ ಔಟಾದರು. ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಗಳಿಸುವ ಹಾಗೂ ಏಕದಿನ ಮಾದರಿಯಲ್ಲಿ ಭಾರತ ಪರ ಅತಿಹೆಚ್ಚು ಶತಕ ಸಿಡಿಸಿದ ಮಹಿಳಾ ಬ್ಯಾಟರ್ ಎನಿಸಿಕೊಳ್ಳುವ ಅವಕಾಶ ಕಳೆದುಕೊಂಡರು.

ಉಳಿದಂತೆ ಶೆಫಾಲಿ ವರ್ಮಾ (25 ರನ್), ಪ್ರಿಯಾ ಪೂನಿಯಾ (28 ರನ್), ನಾಯಕಿ ಹರ್ಮನ್ ಪ್ರೀತ್ ಕೌರ್ (42 ರನ್) ಹಾಗೂ ಜೆಮಿಮಾ ರಾಡ್ರಿಗಸ್ (ಅಜೇಯ 19 ರನ್) ಉಪಯುಕ್ತ ಆಟವಾಡುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.

ಆಫ್ರಿಕಾ ತಂಡದ ಪರ ಅಯಬೊಂಗಾ ಖಾಕಾ, ತುಮಿ ಸೆಖುಖುನೆ, ಎನ್. ಮಾಲ್ಟಾ ತಲಾ ಒಂದೊಂದು ವಿಕೆಟ್ ಪಡೆದರು.

Share This Article