Connect with us

Latest

ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾದ ಮೂಲಕ ರುಪೇ ಕಾರ್ಡನ್ನು ಭಾರತದಾದ್ಯಂತ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಭಾರೀ ನಷ್ಟವಾಗುತ್ತಿದೆ ಎಂದು ಮಾಸ್ಟರ್ ಕಾರ್ಡ್ ಅಮೆರಿಕ ಸರ್ಕಾರಕ್ಕೆ ದೂರು ನೀಡಿದೆ.

ಗ್ರಾಹಕರು, ಹಣಕಾಸು ಸಂಸ್ಥೆಗಳು ವ್ಯಾಪಾರಿಗಳ ಜೊತೆ ಸೇತುವೆಯಂತೆ ಕೆಲಸ ಮಾಡುವ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ನೀಡಿದ ದೂರಿನಲ್ಲಿ ಭಾರತದ ಪ್ರಧಾನಿ ಮೋದಿಯವರ ಆರ್ಥಿಕ ನೀತಿಯಿಂದಾಗಿ ನಮ್ಮ ವ್ಯವಹಾರದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಉಲ್ಲೇಖಿಸಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉತ್ತೇಜಿಸುತ್ತಿರುವುದು ಸ್ವಾಗತಾರ್ಹ. ಆದರೆ ಅವರು ರಾಷ್ಟ್ರೀಯತೆ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಭಾರತದ ರುಪೇ ಕಾರ್ಡ್ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ಭಾರತದಲ್ಲಿ ಹೆಚ್ಚು ವ್ಯವಹಾರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದಿದೆ.

ಹೊಡೆತ ಹೇಗೆ?
ಉದಾಹರಣೆಗೆ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಗ್ರಾಹಕ ತನ್ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸುತ್ತಾನೆ. ಗ್ರಾಹಕನ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ಅದರಲ್ಲಿ ಹಣ ಇದ್ದರೆ ಮಾತ್ರ ಆತನ ಬ್ಯಾಂಕಿನಿಂದ ಆನ್ ಲೈನ್ ಶಾಪಿಂಗ್ ತಾಣದ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ಮಾಸ್ಟರ್ ಕಾರ್ಡ್ ನಂತಹ ಸಂಸ್ಥೆಗಳು ನಿರ್ವಹಿಸುತ್ತವೆ. ಇವುಗಳ ನಿರ್ವಹಣೆಗೆ ಬ್ಯಾಂಕ್ ಗಳಿಂದ ಶುಲ್ಕವನ್ನು ವಸೂಲಿ ಮಾಡುತ್ತವೆ. ರುಪೇ ಕಾರ್ಡ್ ಜಾರಿಗೆ ಬರುವುದಕ್ಕಿಂತ ಮೊದಲು ಬ್ಯಾಂಕ್ ಗಳ ಈ ಆನ್‍ಲೈನ್ ವ್ಯವಹಾರಕ್ಕೆ ಶುಲ್ಕ ಪಡೆಯುವ ಮೂಲಕ ವೀಸಾ ಹಾಗೂ ಮಾಸ್ಟರ್‌ಕಾರ್ಡ್ ಕಂಪೆನಿಗಳು ಲಾಭ ಪಡೆದುಕೊಳ್ಳುತ್ತಿದ್ದವು. ಈಗ ದೇಶದ ಹಲವು ಬ್ಯಾಂಕ್ ಗಳು ರುಪೇ ಕಾರ್ಡ್ ಗಳನ್ನು ನೀಡುತ್ತಿರುವ ಕಾರಣ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ಕಂಪೆನಿಗೆ ಭಾರೀ ಹೊಡೆತ ಬಿದ್ದಿದೆ.

ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‍ಪಿಸಿಐ) ಸಂಸ್ಥೆ ರುಪೇ ಕಾರ್ಡನ್ನು ನಿರ್ವಹಿಸುತ್ತಿದೆ. ಈ ವ್ಯವಸ್ಥೆಯಲ್ಲಿ ನೀಡಬೇಕಾದ ಶುಲ್ಕ ಕಡಿಮೆ ಇದೆ. 2014ರಲ್ಲಿ ಭಾರತದಲ್ಲಿ ಜಾರಿಗೆ ಬಂದ ರುಪೇ ಕಾರ್ಡ್ ಈಗ ದೈತ್ಯ ವೀಸಾವನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿದೆ. ಮಾಹಿತಿಗಳ ಪ್ರಕಾರ ಭಾರತದ ಸುಮಾರು 50 ಕೋಟಿ ಗ್ರಾಹಕರು ರುಪೇ ಕಾರ್ಡ್ ಬಳಸುತ್ತಿದ್ದಾರೆ. ದೇಶದ ಕಾರ್ಡ್ ನೆಟ್‍ವರ್ಕ್ ಗಳ ಪೈಕಿ ರುಪೇ ಶೇ.56 ಪಾಲನ್ನು ಹೊಂದಿದೆ. ಜನಧನ್ ಖಾತೆಯನ್ನು ಹೊಂದಿದವರಿಗೆ ರುಪೇ ಕಾರ್ಡ್ ಗಳನ್ನು ನೀಡಲಾಗುತ್ತಿದೆ.

ಮೋದಿ ಕರೆ ನೀಡಿದ್ದು ಏನು?
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡುತ್ತಲೇ ಇದ್ದಾರೆ. ಅಲ್ಲದೇ ಆನ್‍ಲೈನ್ ವಹಿವಾಟಿಗೆ ಸಂಬಂಧಪಟ್ಟಂತೆ ದೇಶೀಯ ರುಪೇ ಕಾರ್ಡ್ ಬಳುಸುವಂತೆ ಭಾರತೀಯರಲ್ಲಿ ಮನವಿಮಾಡಿಕೊಂಡಿದ್ದರು. ರುಪೇ ಕಾರ್ಡ್ ಬಳಸುವುದರಿಂದ ವಹಿವಾಟಿನ ಶುಲ್ಕಗಳು ಭಾರತದಲ್ಲೇ ಉಳಿಯಲಿದೆ. ಇದರಿಂದಾಗಿ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *