ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ (Sachin Panchal) ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ನೀಡದೇ ಇದ್ದರೆ ಜನವರಿ 4 ರಂದು ಕಲಬುರಗಿಯಲ್ಲಿ (Kalaburagi) ಬೃಹತ್ ಪ್ರತಿಭಟನೆ (Protest) ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು (CM Siddaramaiah) ಸಿಬಿಐ ತನಿಖೆಗೆ ಆದೇಶಿಸಿದರೆ ಒಳ್ಳೆಯದು. ಜನವರಿ 3 ರವರೆಗೂ ಕಾಯುತ್ತೇವೆ. ಸಿಬಿಐಗೆ ನೀಡದೇ ಇದ್ದರೆ ಜ.4 ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
Advertisement
ಈ ಸಂದರ್ಭದಲ್ಲಿ ಆರೋಪಿ ರಾಜು ಕಪನೂರು ಪ್ರಿಯಾಂಕ್ ಖರ್ಗೆ (Priyank Kharge), ಸಿದ್ದರಾಮಯ್ಯ, ಡಿಕೆಶಿ ಜತೆಗೂ ಇರುವ ಫೋಟೋ ರಿಲೀಸ್ ಮಾಡಿ, ಈತ ಖರ್ಗೆ ಕುಟುಂಬಕ್ಕೆ ಪರಮಾತ್ರ. ರಾಜೂನ ಸಿಎಂ, ಡಿಸಿಎಂ ತೊಡೆ ಮೇಲೆ ಕೂರಿಸಿಕೊಳ್ಳುವುದು ಬಾಕಿ. ಬಿಟ್ಟರೆ ತಲೆ ಮೇಲೂ ಕೂರಿಸಿಕೊಳ್ತಾರೆ. ಪ್ರಿಯಾಂಕ್ ಖರ್ಗೆ ತಮಗೆ ರಾಜು ಕಪನೂರು ಪರಿಚಯ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ ಎಂದರು.
Advertisement
Advertisement
ಸಿದ್ದರಾಮಯ್ಯ ನಿಜವಾದ ಅಹಿಂದ ನಾಯಕ ಆಗಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಿ ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಲಿ. ಆಗ ನಾವು ನಿಮ್ಮನ್ನು ಅಹಿಂದ ನಾಯಕ, ಬಲಿಷ್ಟ ಸಿಎಂ ಎಂದು ಒಪ್ಪಿಕೊಳ್ಳುತ್ತೇವೆ ಎಂದು ವಿಜಯೇಂದ್ರ ಸವಾಲ್ ಎಸೆದರು. ಇದನ್ನೂ ಓದಿ: ವಿವಾದ ಇಲ್ಲಿಗೆ ಮುಗಿಸೋಣ – ಸಿಎಂ ಹೆಸರು ಸಮರ್ಥಿಸಿದ್ದ ಪ್ರತಾಪ್ ಸಿಂಹ ಯೂ ಟರ್ನ್
Advertisement
ನಮ್ಮ ಕಲಬುರಗಿ ನಾಯಕರ ಕೊಲೆ ಬಗ್ಗೆ ಸಚಿನ್ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆಂದೋಲನ ಸ್ವಾಮೀಜಿ ಕೊಲೆ ಬಗ್ಗೆಯೂ ಪ್ರಸ್ತಾಪವಾಗಿದೆ. ಕೊಲ್ಹಾಪುರದ ಸುಪಾರಿ ಕಿಲ್ಲರ್‌ಗಳಿಗೆ ಸುಪಾರಿ ಕೊಡಲಾಗಿದೆ ಅಂತ ಇದೆ. ಹೀಗಾಗಿ ಎಲ್ಲ ಅಂಶಗಳ ಬಗ್ಗೆಯೂ ಪಾರದರ್ಶಕ ತನಿಖೆಗೆ ಸಿಬಿಐ ತನಿಖೆ ನಡೆಯಬೇಕು. ನಮ್ಮ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂದರು.
ಪ್ರಿಯಾಂಕ್ ಖರ್ಗೆ ಇಲಾಖೆ ಕೇವಲ ಗ್ರಾಮೀಣಾಭಿವೃದ್ಧಿ, ಐಟಿಬಿಟಿ ಅಷ್ಟೇ ಅಲ್ಲ ಪ್ರಿಯಾಂಕ್ ಖರ್ಗೆ ಸರ್ವ ಇಲಾಖೆಗೂ ಮಂತ್ರಿ. ಸದನದಲ್ಲಿ ಎಲ್ಲಾ ಇಲಾಖೆಗಳ ಪ್ರಶ್ನೆಗೂ ಎದ್ದು ಎದ್ದು ಉತ್ತರ ಕೊಡ್ತಾರೆ. ಅವರು ಬಹಳ ದೊಡ್ಡ ಜ್ಞಾನಿ, ಪ್ರಭಾವಿ. ಬಿಜೆಪಿಯವರಿಗೆ ಆರೋಪ ಮಾಡುವ ಚಟ ಅಂತ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಪೋಕ್ಸೋ ಕೇಸ್ ನಿಂದ ಡೈವರ್ಟ್ ಮಾಡಲು ಆರೋಪ ಮಾಡ್ತಿದ್ದಾರೆ ಅಂದಿದ್ದಾರೆ. ನೀವೇನು ಹೈಕೋರ್ಟಾ? ಸುಪ್ರೀಂಕೋರ್ಟಾ? ಯಡಿಯೂರಪ್ಪ ಬಗ್ಗೆ ನೀವೇನು ಮಾತಾಡೋದು? ನಿಮ್ಮ ಆಪ್ತನ ಕುಮ್ಮಕ್ಕಿನಿಂದಲೇ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಇದೇ ತಿಂಗಳ 27ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟ್‌ನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
ನಿನ್ನೆ ನಾನು, ವಿಪಕ್ಷ ನಾಯಕರು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಭಾಲ್ಕಿ ತಾಲ್ಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‍ಗೆ 5 ಜನರು ಸಹೋದರಿಯರಿದ್ದಾರೆ ಎಂದು ವಿವರಿಸಿದರು. ಬಿಜೆಪಿಯವರಿಗೆ ರಾಜಕೀಯ ತೆವಲು, ಚಟ, ಹಿಟ್ ಆಂಡ್ ರನ್ ಎಂದು ಕಾಂಗ್ರೆಸ್ಸಿನವರು ಮಾತನಾಡುತ್ತಾರೆ ಎಂದರು.
ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಹಾಕಿಕೊಂಡಿದ್ದಾಗ ಅವರ ಇಬ್ಬರು ಸಹೋದರಿಯರಾದ ಸವಿತಾ, ಸುನೀತಾ ಮಧ್ಯಾಹ್ನವೇ 2.15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿದ್ದರು. ಗೋಗರೆದು ಕೇಳಿದರೆ ಪ್ರಾಣ ಉಳಿಸಲು ಕೋರಿದರೆ, ಅವರ ಮನವಿಯನ್ನು ಕಿಂಚಿತ್ತೂ ಲೆಕ್ಕಿಸದೆ, ಅಮಾನವೀಯವಾಗಿ ಪಿಎಸ್‍ಐ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಅವರನ್ನು ಪೊಲೀಸ್ ಸ್ಟೇಷನ್‍ಗಳಿಗೆ ತಿರುಗಾಡಿಸಿದ್ದರು ಎಂದು ಟೀಕಿಸಿದರು.
ಸಚಿನ್ ಕುಟುಂಬದವರಿಂದ ಪೊಲೀಸರು ದೂರು ಸ್ವೀಕರಿಸಿಲ್ಲ, ಸಚಿನ್ ಹುಡುಕುವ ಕೆಲಸವನ್ನೂ ಮಾಡಿಲ್ಲ. ಪೊಲೀಸ್ ಅಧಿಕಾರಿಗಳ ವರ್ತನೆಯು ಖಂಡನೀಯ. ಕಾಂಗ್ರೆಸ್ ಹಿರಿಯ ಮುಖಂಡ, ಖರ್ಗೆ ಕುಟುಂಬಕ್ಕೆ ಹತ್ತಿರ ಇರುವ ರಾಜು ಕಪನೂರ್ ಈ ಪ್ರಕರಣದ ಹಿಂದಿನ ಪ್ರಮುಖ ಆರೋಪಿ ಎಂಬುದು ಡೆತ್ ನೋಟಿನಲ್ಲಿದೆ ಎಂದು ತಿಳಿಸಿದರು.
ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಬಡ ಕುಟುಂಬಕ್ಕೆ ಅನ್ಯಾಯವಾಗಿದೆ. ಕುಟುಂಬದ ಆಧಾರಸ್ತಂಭ ಕುಸಿದಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ನಾವು ಒತ್ತಾಯಿಸುತ್ತಿದ್ದೇವೆ. ದೆಹಲಿಯಲ್ಲಿ ಪ್ರಮುಖ ಸಭೆ ಇದ್ದರೂ ಇಲ್ಲಿ ಬಂದಿದ್ದೇನೆ. ಭಾಲ್ಕಿಗೆ ಹೋಗಿ ಬಂದಿದ್ದೇವೆ ಎಂದ ಅವರು, ರಾಜು ಕಪನೂರ್, ಖರ್ಗೆ ಕುಟುಂಬಕ್ಕೆ ಪರಮಾಪ್ತ. ಬಡ ಸಚಿನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಇಚ್ಛೆ ನಮ್ಮದು ಎಂದರು.