ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

Public TV
1 Min Read
landslides in Wayanad

– 2018ರಲ್ಲಿ ಕೊಡಗಿನಲ್ಲಿ ನಡೆದ ಭೂಕುಸಿತದಂತೆ ಕುಸಿದ ಭೂಮಿ

ತಿರುವನಂತಪುರಂ: ಕೊಡಗಿನಲ್ಲಿ 2018ರಲ್ಲಿ ನಡೆದ ಜಲಸ್ಫೋಟದಂತೆ ಕೇರಳದಲ್ಲೂ (Kerala) ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ವಯನಾಡ್ (Wayanad) ಜಿಲ್ಲೆಯ ಮೆಪ್ಪಾಡಿಯಲ್ಲಿ(Meppadi) ಗುಡ್ಡ ಕುಸಿದಿದೆ. ಈ ದುರಂತದಲ್ಲಿ 19 ಮಂದಿ ಸಾವನ್ನಪ್ಪಿ ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ನಸುಕಿನ ಜಾವ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದರೆ ಮುಂಜಾನೆ 4:10ರ ವೇಳೆ ಎರಡನೇ ಬಾರಿ ಸಂಭವಿಸಿದೆ. ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು ನೋವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ.

 

ವಯನಾಡು ಜಿಲ್ಲೆಯ ಅಧಿಕಾರಿಗಳ ಪ್ರಕಾರ ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತವೊಂದರಲ್ಲಿ ಸಾವನ್ನಪ್ಪಿದೆ.

ಭಾರೀ ಭೂಕುಸಿತದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ.

ಎನ್‌ಡಿಆರ್‌ಎಫ್‌ನ ಹೆಚ್ಚುವರಿ ತಂಡ ವಯನಾಡ್‌ಗೆ ತೆರಳುತ್ತಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ವಯನಾಡ್‌ಗೆ ತೆರಳಲು ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳಿಗೆ ಸೂಚನೆ ನೀಡಲಾಗಿದೆ.

ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಮುಂದಿನ 3 ಗಂಟೆಗಳಲ್ಲಿ ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಪ್ರತ್ಯೇಕವಾದ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

Share This Article