ಖಚಿತ ಮಾಹಿತಿ ನೀಡಿ 10 ಲಕ್ಷ ಮಂದಿಯನ್ನು ರಕ್ಷಿಸಿದ್ದ ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

Public TV
2 Min Read
fani cyclone 7

ನವದೆಹಲಿ: ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಫೋನಿ ಚಂಡಮಾರುತದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ 10 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವ ಮೂಲಕ ಸಾವು ನೋವಿನ ಪ್ರಮಾಣವನ್ನು ಕನಿಷ್ಟ ಮಟ್ಟಕ್ಕೆ ಇಳಿಸಿದ ಭಾರತದ ಕಾರ್ಯ ವೈಖರಿಗೆ ವಿಶ್ವಸಂಸ್ಥೆ ಹಾಗೂ ವಿವಿಧ ರಂಗದ ತಜ್ಞರು ಶ್ಲಾಘಿಸಿದ್ದಾರೆ.

fani cyclone 3

ಚಂಡಮಾರುತದಿಂದಾಗಿ ಪುರಿಯಲ್ಲಿ ಭೂ ಕುಸಿತ ಉಂಟಾಗುವ ಸ್ಥಳವನ್ನು ನಿಖರವಾಗಿ ಗುರುತಿಸಿದ್ದ ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಸಿಬ್ಬಂದಿಯ ಕಾರ್ಯದ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ಸೂಚಿಸಿದೆ. “ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿ ಜನಸಾಮಾನ್ಯರನ್ನು ರಕ್ಷಿಸುವ ನಿಟ್ಟಿನಲ್ಲಿ ಐಎಂಡಿ ಮಾಡಿರುವ ಕೆಲಸ ಅನುಕರಣೀಯ” ಎಂದು ವಿಶ್ವಸಂಸ್ಥೆಯ ಪ್ರಕೃತಿ ವೈಪರೀತ್ಯ ನಿರ್ವಹಣಾ ವಿಭಾಗದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಮಿ ಮಿಝುತೋರಿ ಹೊಗಳಿದ್ದಾರೆ.

fani cyclone 6

ಫೋನಿ ಚಂಡಮಾರುತ ಪುರಿಯ ಸಮುದ್ರ ತೀರಕ್ಕೆ ಶುಕ್ರವಾರ ಅಪ್ಪಳಿಸಲಿದೆ ಮತ್ತು ಅಲ್ಲಿ ಭೂ ಕುಸಿತ ಸಂಭವಿಸಲಿದೆ ಎಂದು ಐಎಂಡಿ ನಿಖರವಾಗಿ ಗುರುತಿಸಿತ್ತು. ಈ ಚಂಡಮಾರುತ ಭಾರೀ ಪ್ರಮಾಣದಲ್ಲಿ ಹಾನಿ ಮಾಡಲಿದೆ ಎಂದು ಅಂದಾಜಿಸಿದ್ದ ಭಾರತ ಸುಮಾರು 12 ಲಕ್ಷ ಮಂದಿಯನ್ನು ಮೊದಲೇ ಸ್ಥಳಾಂತರ ಮಾಡಿತ್ತು. ಹೀಗಾಗಿ ಸಾವು ನೋವಿನ ಸಂಖ್ಯೆಯನ್ನು ಕಡಿಮೆ ಮಾಡಿದ್ದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

fani cyclone 4

ಮಾಮಿ ಮಿಝುತೋರಿ ಪ್ರತಿಕ್ರಿಯಿಸಿ, ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಲಕ್ಷಾಂತರ ಜೀವಗಳನ್ನು ಉಳಿಸಿದೆ. ಈ ಆಪರೇಷನ್‍ನಲ್ಲಿ 45 ಸಾವಿರ ಸ್ವಯಂಸೇವಕರು ಹಾಗೂ 2 ಸಾವಿನ ತುರ್ತು ನಿರ್ವಹಣಾ ಸಿಬ್ಬಂದಿ ಶ್ರಮವಹಿಸಿದ್ದಾರೆ. ನಿರಂತರವಾಗಿ ಸುಮಾರು 30 ಲಕ್ಷಕ್ಕೂ ಅಧಿಕ ಜನರಿಗೆ ಮಾಧ್ಯಮಗಳ ಮುಖಾಂತರ ಫೋನಿ ಚಂಡಮಾರುತದ ಬಗ್ಗೆ ಮಾಹಿತಿ ನೀಡಿದ ಭಾರತ ಸರ್ಕಾರದ ಕ್ರಮ ಶ್ಲಾಘಾನೀಯ ಎಂದಿದ್ದಾರೆ.

fani cyclone 4 1

ಒಡಿಶಾದಲ್ಲಿ 4.6 ಕೋಟಿ ಜನರು ಫೋನಿ ಚಂಡಮಾರುತದಿಂದ ಸಂತ್ರಸ್ಥರಾಗಿದ್ದು ಆಸ್ತಿ-ಪಾಸ್ತಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ, ಫೋನಿ ಚಂಡಮಾರುತ ಇದೀಗ ಪಶ್ಚಿಮ ಬಂಗಾಳದತ್ತ ತಿರುಗಿದೆ.

ಈವರೆಗೆ ಫಾನಿ ಚಂಡಮಾರುತಕ್ಕೆ ಆರ್ಭಟಕ್ಕೆ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಒಡಿಶಾದ 9 ಜಿಲ್ಲೆಗಳಲ್ಲಿ ಫಾನಿ ಚಂಡಮಾರುತ ತನ್ನ ರೌದ್ರಾವಾತಾರ ಪ್ರದರ್ಶಿಸುತ್ತಿದೆ. ಭುವನೇಶ್ವರ ಒಂದೇ ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಯೂರ್‍ಬಂಜ್ ಜಿಲ್ಲೆಯಲ್ಲಿ 4 ಮಂದಿ, ಪುರಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

fani cyclone 2

ಈ ಹಿಂದೆ 1999ರಲ್ಲಿ ಒಡಿಶಾಗೆ ಕಾಲಿಟ್ಟಿದ್ದ ಸೂಪರ್ ಚಂಡಮಾರುತಕ್ಕೆ 10 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಸೂಪರ್ ಚಂಡಮಾರುತಕ್ಕಿಂತಲೂ ಈ ಬಾರಿಯ ಫೋನಿ ಜಾಸ್ತಿ ಪ್ರಮಾಣದಲ್ಲಿ ಹಾನಿ ಮಾಡಿದ್ದರೂ ಸಾವು ನೋವಿನ ಸಂಖ್ಯೆ ತಗ್ಗಿದೆ.

Share This Article
Leave a Comment

Leave a Reply

Your email address will not be published. Required fields are marked *